ಕೊಪ್ಪಳ: ಗಂಗಾವತಿಯಿಂದ ತಾವರಗೇರ ತಲುಪುವ 42 ಕಿ.ಮೀನಲ್ಲಿ ಸುಮಾರು 94ಕ್ಕೂ ಹೆಚ್ಚು ರೋಡ್ ಹಂಪ್ಸ್‌ಗಳಿದ್ದು, ವಾಹನ ಸವಾರರು ಸುಸ್ತಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣ ಸಮೀಪದ NH63ರಿಂದ ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದಲ್ಲಿ ಹಾಯ್ದು ಹೋಗುವ NH 69 ಮತ್ತು 75ಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಬರೀ ರೋಡ್ ಹಂಪ್ಸ್‌ನಿಂದಲೇ ಕೂಡಿದೆ. ಇದರಿಂದ ಈ ರಸ್ತೆಯಲ್ಲಿ ಓಡಾಡುವ ಕಾರು, ಲಾರಿ ಹಾಗೂ ಬೈಕ್ ಸವಾರರ ಗೋಳು ಹೇಳ ತೀರದಾಗಿದೆ. ಒಟ್ಟು 117 ಕಿ.ಮೀ ಉದ್ದದ ಈ ರಸ್ತೆ ಪೈಕಿ ಸದ್ಯ ಗಂಗಾವತಿಯಿಂದ ಮುದಗಲ್‌ವರೆಗೆ ಸುಮಾರು 72 ಕಿ.ಮೀ ರಸ್ತೆ ಮಾತ್ರ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ. ಕಳೆದ 10 ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿ ಮಾಡಲಾಗಿದ್ದು, ಇತ್ತೀಚೆಗೆ ಮತ್ತೊಮ್ಮೆ ಮೇಲು ಡಾಂಬರೀಕರಣ ಕೂಡ ಮಾಡಲಾಗಿದೆ. ಇದರಿಂದ ರಸ್ತೆ ಚೆನ್ನಾಗಿದ್ದರೂ ಈ ರಸ್ತೆಯಲ್ಲಿ ಅವೈಜ್ಞಾನಿಕ ರೋಡ್ ಹಂಪ್ಸ್‌ನಿಂದ ವಾಹನ ಚಾಲಕರು ಈ ರಸ್ತೆಯ ಸಹವಾಸವೇ ಬೇಡ ಎನ್ನುತ್ತಿದ್ದಾರೆ.
ಎರಡು ಟೋಲ್ ಗೇಟ್:
ಕಳೆದ 10 ವರ್ಷದ ಹಿಂದೆ ರಾಜ್ಯ ಹೆದ್ದಾರಿ 29ರ ಅಭಿವೃದ್ಧಿ ಮಾಡಲಾಗಿದೆ. ಮೊದಲು ಈಗಿನ ಜಿಲ್ಲಾ ರಸ್ತೆಯಂತೆ ಇದ್ದ ಎನ್‌ಎಚ್ 29ನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗಿದೆ. ರಸ್ತೆ ಅಭಿವೃದ್ಧಿ ನಂತರ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ರಸ್ತೆ ನಿರ್ವಹಣೆ ಮಾಡುತ್ತಿದೆ. ಗಂಗಾವತಿಯಿಂದ ಮುದಗಲ್ ನಡುವಿನ ಸುಮಾರು 72 ಕಿ.ಮೀ ಎರಡು ಕಡೆ ಟೋಲ್ ಗೇಟ್ ಹಾಕಿ, ವಾಹನಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ.
ಕನಕಗಿರಿ ಸಮೀಪದ ಸುಳೇಕಲ್ ಬಳಿ ಹಾಗೂ ಮುದಗಲ್ ಸಮೀಪದಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲಾಗಿದೆ. ಕೆಆರ್‌ಡಿಸಿಎಲ್ ಖಾಸಗಿ ಏಜನ್ಸಿಗಳ ಮೂಲಕ ವಾಹನ ಸವಾರರಿಂದ ಟೋಲ್ ಹಣ ಸಂಗ್ರಹ ಮಾಡುತ್ತಿದೆ. ಆದರೆ, ಇಂಥ ಕೆಟ್ಟ ರಸ್ತೆಯಲ್ಲಿ ಹಣ ಕೊಟ್ಟು ಓಡಾಡಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಈ ರಸ್ತೆಯಲ್ಲಿ ಭಾರಿ ಪ್ರಮಾಣದ ವಾಹನ ದಟ್ಟಣೆಯೂ ಕಡಿಮೆ ಆಗಿದೆ.
ನಾಲ್ಕು ರೂಟ್ ಬಸ್ ರದ್ದು;
ಕೇವಲ ರೋಡ್ ಹಂಪ್ಸ್‌ಗಳ ಕಾರಣಕ್ಕಾಗಿಯೇ ಕನಕಗಿರಿ, ತಾವರಗೇರ ಮಾರ್ಗವಾಗಿ ಕಲಬುರಗಿ, ಬೀದರ್‌ಗೆ ಸಂಚರಿಸುತ್ತಿದ್ದ 4 ಸರ್ಕಾರಿ ಬಸ್‌ಗಳು ರದ್ದಾಗಿವೆ. ಬದಲಾಗಿ ಕಾರಟಗಿ, ಸಿಂಧನೂರು ಮಾರ್ಗವಾಗಿ ಸಂಚರಿಸುತ್ತಿವೆ. ಮತ್ತೊಂದೆಡೆ ಈ ಮಾರ್ಗವಾಗಿ ಲಾರಿ, ಕಾರು ಸೇರಿ ಸರಕು ಸಾಗಣೆ ಹಾಗೂ ಪ್ರಯಾಣಿಕರ ವಾಹನಗಳ ಸಂಚಾರವೂ ಕಡಿಮೆ ಆಗಿದೆ. ಇದರಿಂದ ಒಂದೆಡೆ ರಾತ್ರಿ ಓಡಾಡುವ ಜನ ಸಾಮಾನ್ಯರಿಗೆ ತೊಂದರೆ ಆಗಿದ್ದರೆ, ಮತ್ತೊಂದೆಡೆ ಈ ಮಾರ್ಗದಲ್ಲಿ ಸಂಚರಿಸುವ ಅನಿವಾರ್ಯತೆ ಇರುವ ಜನರ ಪಾಡು ಹೇಳತೀರದಾಗಿದೆ.

