ಬಳ್ಳಾರಿ: ನೆಗಡಿ, ತಲೆನೋವು ಕಾಣಿಸಿಕೊಂಡಾಗ ಬಳಸುವ ಔಷಧಿಯ ಡಬ್ಬಿಯನ್ನ ನುಂಗಿ 9 ತಿಂಗಳ ಮಗುವೊಂದು ಸಾವನ್ನಪ್ಪಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಿಡುಗುರ್ತಿ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕರಿಬಸವಯ್ಯ ಹಾಗೂ ನಿಂಗಮ್ಮ ಅವರ ಮೊದಲ ಮಗಳು 9 ತಿಂಗಳ ಮಗು ಭಾರತಿ ಆಟ ಆಡುತ್ತಾ ಡಬ್ಬಿಯನ್ನು ನುಂಗಿದ್ದು, ಅದು ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದಾಳೆ. ಗುರುವಾರ ರಾತ್ರಿ ಮಗುವಿನ ತಾಯಿ ಮನೆಯ ಕೆಲಸ ಮಾಡುತ್ತಿರುವಾಗ ಮನೆಯ ಮುಂದೆ ಮಕ್ಕಳೊಂದಿಗೆ ಮಗು ಆಟವಾಡುತ್ತಿತ್ತು. ಈ ವೇಳೆ ಆಕಸ್ಮಾತ್ ಆಗಿ ಔಷಧಿ ಡಬ್ಬಿಯನ್ನು ಮಗು ನುಂಗಿ ನರಳಾಡಲು ಆರಂಭಿಸಿದೆ.
Advertisement
ತಕ್ಷಣವೇ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲು ಪೋಷಕರು ಮುಂದಾದಾಗ ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.