ಸಾಮಾನ್ಯವಾಗಿ ಒಂದು ಸಿನಿಮಾ ಆದ ನಂತರವೇ ದರ್ಶನ್ (Darshan) ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವುದು ವಾಡಿಕೆ. ಸಿನಿಮಾ ಅನೌನ್ಸ್ ಕೂಡ ಹಾಗೆಯೇ ಆಗುತ್ತವೆ. ಆದರೆ, ಈ ಬಾರಿ ಆ ನಿಯಮವನ್ನು ಮುರಿಯಲಾಗಿದೆ. ದರ್ಶನ್ ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು ಸಂದಿರುವ ಸಂದರ್ಭದಲ್ಲಿ ಹಾಗೂ ಹುಟ್ಟುಹಬ್ಬದ (Birthday) ಪ್ರಯುಕ್ತ ಒಟ್ಟು ಒಂಬತ್ತು ಸಿನಿಮಾಗಳನ್ನು ಘೋಷಣೆ ಮಾಡಲಾಗಿದೆ.
ಇನ್ನಷ್ಟೇ ಶೂಟಿಂಗ್ ಶುರುವಾಗಬೇಕಿರುವ ಡೆವಿಲ್ ಸಿನಿಮಾವನ್ನು ಎಣಿಕೆಗೆ ತೆಗೆದುಕೊಂಡರೆ ಸದ್ಯ ಡಿ ಬಾಸ್ ಬಳಿ ಹತ್ತು ಸಿನಿಮಾಗಳ ಪಟ್ಟಿ ಸಿಗುತ್ತದೆ. ಡೆವಿಲ್ ಸಿನಿಮಾವನ್ನು ಮಿಲನ ಚಿತ್ರ ಖ್ಯಾತಿಯ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದರೆ, ಇನ್ನೆರಡು ಚಿತ್ರಗಳಿಗೆ ಕಾಟೇರ ಖ್ಯಾತಿಯ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಲಿದ್ದಾರೆ.
ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್ ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬದಂದು ಸಿನಿಮಾಗಳನ್ನು ಘೋಷಣೆ ಕೂಡ ಮಾಡಿದ್ದಾರೆ.
ದರ್ಶನ್ ಸಿನಿಮಾಗಳಿಗೆ ಬಂಡವಾಳ ಹಾಕಿದರೆ ಹಣಕ್ಕೆ ಮೋಸವಿಲ್ಲ ಎನ್ನುವ ಮಾತು ಮೊದಲಿನಿಂದಲೂ ಇದೆ. ಕಾಟೇರ ಗೆದ್ದ ನಂತರ ಈ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಸಾಲು ಸಾಲು ಸಿನಿಮಾಗಳು ಘೋಷಣೆ ಆಗಿವೆ. ಯಾವೆಲ್ಲ ಸಿನಿಮಾಗಳು, ಯಾವಾಗೆಲ್ಲ ಬರುತ್ತವೆ ಎನ್ನುವುದು ಕಾದು ನೋಡಬೇಕಿದೆ.