ವಿಶಾಖಪಟ್ಟಣ: ಇಲ್ಲಿನ (Visakhapatnam) ಉಕ್ಕು ಸ್ಥಾವರದಲ್ಲಿ (Vizag Steel Plant) ಕಾರ್ಮಿಕರ ಮೇಲೆ ಭಾರೀ ಪ್ರಮಾಣದ ಕರಗಿದ ಲೋಹ ಹರಿದು 8 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 4 ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಶವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಟನ್‌ಗಳಷ್ಟು ಕರಗಿದ ಲೋಹವಿದ್ದ ದೊಡ್ಡ ಗಾತ್ರದ ಬಕೆಟ್ ಉರುಳಿ ಬಿದ್ದಿದೆ. ಇದರಿಂದ ಸ್ಥಾವರದ ಉಕ್ಕಿನ ಕರಗುವ ಕೇಂದ್ರ ಸಂಖ್ಯೆ 1 ರಲ್ಲಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಖಾಸಗಿ ಜೆಟ್ ಪತನ – ಇಬ್ಬರು ಪೈಲಟ್ ಸಜೀವ ದಹನ, ಬೆಚ್ಚಿಬೀಳಿಸುವ ವಿಡಿಯೋ ವೈರಲ್
8 dead as molten metal falls on workers at #Vizagsteel plant
Watch video: pic.twitter.com/lKs73QCogr
— The Indian Express (@IndianExpress) June 8, 2026
ಕರಗಿದ ಉಕ್ಕು ಕೆಳಗೆ ಬೀಳುವ ಕೆಲವೇ ಕ್ಷಣಗಳ ಮೊದಲು ಸ್ಫೋಟ ಸಂಭವಿಸಿದೆ ಎಂದು ರಕ್ಷಿಸಲ್ಪಟ್ಟ ಕಾರ್ಮಿಕರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯಲ್ಲಿ ಹಲವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕನಿಷ್ಠ ಆರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಹಲವಾರು ಅಗ್ನಿಶಾಮಕ ವಾಹನಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ಅವಘಡದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡುವಂತೆ ನಿರ್ದೇಶಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷ ವೈ ಎಸ್ ಜಗನ್ ಮೋಹನ್ ರೆಡ್ಡಿಯವರು ಕೂಡ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಮಗ್ರ ತನಿಖೆಗೆ ಒತ್ತಾಯಿಸಿದ್ದು, ಹೊಣೆಗಾರರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಎಲ್ಲಾ ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ಸುರಕ್ಷತಾ ಮಾನದಂಡಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಒತ್ತಿ ಹೇಳಿದರು. ಈ ಘಟನೆಯಲ್ಲಿ ನೊಂದವರ ಪರವಾಗಿ ಬೆಂಬಲಕ್ಕೆ ನಿಲ್ಲುವಂತೆ ಪಕ್ಷದ ನಾಯಕರಿಗೆ ಅವರು ಕರೆ ನೀಡಿದ್ದಾರೆ.
ಜೂನ್ 2012 ರಲ್ಲಿ ಸಹ ಉಕ್ಕು ಕರಗಿಸುವ ಘಟಕ ಸಂಖ್ಯೆ 3 ರಲ್ಲಿ ಹೊಸದಾದ ಆಮ್ಲಜನಕ ಸ್ಥಾವರ ಸ್ಫೋಟಗೊಂಡು 16 ಕಾರ್ಮಿಕರು ಸಾವನ್ನಪ್ಪಿದ್ದರು. ಅಧಿಕಾರಿಗಳು ಆಮ್ಲಜನಕ ಸ್ಥಾವರದ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿತ್ತು. ಇದನ್ನೂ ಓದಿ: ಇರಾನ್‌ನ 20 ಸ್ಥಳಗಳನ್ನು ಗುರಿಯಾಗಿಸಿ ಇಸ್ರೇಲ್ ಬಾಂಬ್ ದಾಳಿ
