-ಫೆಬ್ರವರಿ 1 ರಿಂದ ಫುಲ್ ಡೇ ಕ್ಲಾಸ್ ಆರಂಭ
ಬೆಂಗಳೂರು: ಕೊರೊನಾದಿಂದ ಮುಚ್ಚಿದ್ದ ಶಾಲೆಗಳು ತೆರೆಯಲಾಗಿದ್ದು, ಪ್ರಸ್ತುತ ಅರ್ಧದಿನ ತರಗತಿಗಳು ನಡೆಯುತ್ತಿದೆ. ಇದೀಗ ಹಿಂದಿನ ಕ್ರಮದಂತೆ ಪೂರ್ತಿ ದಿನ ತರಗತಿ ನಡೆಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಡೇಟ್ ಫಿಕ್ಸ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಸುರೇಶ್ ಕುಮಾರ್, ಕೆಲದಿನಗಳ ಹಿಂದೆ 6-9 ನೇ ತರಗತಿಗೆ ವಿದ್ಯಾಗಮ ಪ್ರಾರಂಭ ಮಾಡಲಾಗಿತ್ತು. ಶೇಕಡ 45 ಹಾಜರಾತಿಯನ್ನು ವಿದ್ಯಾಗಮದಲ್ಲಿ ಪಡೆಯಲಾಗಿತ್ತು. ದ್ವಿತೀಯ ಪಿಯುಸಿ – 75%, ಎಸ್‍ಎಸ್‍ಎಲ್‍ಸಿ – 70% ಹಾಜರಾತಿ ಕಂಡುಬಂದಿದೆ. ಎಲ್ಲಾ ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಲಾಗಿದೆ. ಶಾಲೆ ಪ್ರಾರಂಭಿಸಿದ ನಂತರ ದೊಡ್ಡ ರೀತಿಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಶಾಲೆಯಿಂದ ಸೋಂಕು ಹರಡಿರುವ ಬಗ್ಗೆ ಸಮಸ್ಯೆ ಕಂಡುಬಂದಿಲ್ಲ ಎಂದರು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತರಗತಿಗಳು ಆರಂಭದ ಬಳಿಕ ಮಕ್ಕಳಿಗೆ ಕಲಿಕಾ ಆಸಕ್ತಿ ಹೆಚ್ಚಾಗಿದೆ. ಆನ್ ಲೈನ್ ಗಿಂತ ಆಫ್ ಲೈನ್ ಕ್ಲಾಸ್ ಬೇಕು ಎಂದು ಮಕ್ಕಳು ಮನವಿ ಮಾಡಿಕೊಂಡಿದ್ದಾರೆ. ಎಲ್ಲಾ ತರಗತಿ ಪ್ರಾರಂಭಕ್ಕೆ ಬೇಡಿಕೆ ಬಂದಿದೆ. ವಿದ್ಯಾಗಮ ಒಂದು ದಿನ ಬಿಟ್ಟು ಒಂದು ದಿನ ಮಾಡುತ್ತಿದ್ದೇವೆ. ಹೀಗಾಗಿ ನಿರಂತರ ಕಲಿಕೆ ಮಕ್ಕಳಿಗೆ ಸಿಗುತ್ತಿಲ್ಲ. ಇದರಿಂದ ಹಾಜರಾತಿ ಕಡಿಮೆಯಾಗಿದೆ. ಈಗಾಗಲೇ ಪರಿಷತ್ ಸದಸ್ಯರ ಜೊತೆ ಶಾಲೆ ಪ್ರಾರಂಭದ ಬಗ್ಗೆ ಚರ್ಚೆ ಮಾಡಿದ್ದೇವೆ. ಶಿಕ್ಷಕರ ಸಂಘದವರು 1-9 ಪ್ರಾರಂಭ ಮಾಡಿ ಎಂದಿದ್ದಾರೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 1 ರಿಂದ, 9 ನೇ ತರಗತಿಯಿಂದ ಪ್ರಥಮ ಪಿಯ ವರೆಗಿನ ತರಗತಿಗಳನ್ನು ಪ್ರಾರಂಭ ಮಾಡುತ್ತೇವೆ. ಈ ತರಗತಿಗಳು ಪೂರ್ತಿ ದಿನದ ತರಗತಿಗಳಾಗಿರುತ್ತವೆ. 6-8 ನೇ ತರಗತಿವರೆಗೆ ವಿದ್ಯಾಗಮ ಮುಂದುವರಿಕೆ ಮಾಡುತ್ತೇವೆ. ಫೆಬ್ರುವರಿ 2ನೇ ವಾರದವರೆಗೆ ಗಮನಿಸಿ ಉಳಿದ ತರಗತಿ ಪ್ರಾರಂಭದ ಬಗ್ಗೆ ಚರ್ಚೆ ನಡೆಸುತ್ತೇವೆ. 1-5 ನೇ ತರಗತಿಗಳನ್ನು ಸದ್ಯಕ್ಕೆ ಪ್ರಾರಂಭಿಸುವ ನಿರ್ಧಾರ ಇಲ್ಲ, ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಅನೇಕ ಜಿಲ್ಲೆಯಲ್ಲಿ ಸಿಂಗಲ್ ಡಿಜಿಟ್ ಇದೆ. ತಜ್ಞರ ಸಮಿತಿ ಅಭಿಪ್ರಾಯದಂತೆ ತರಗತಿ ಪ್ರಾರಂಭ ಮಾಡಲು ತೀರ್ಮಾನಿಸಿದ್ದೇವೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಶಾಲಾ ಕಾಲೇಜುಗಳಲ್ಲಿನ ಶುಲ್ಕ ಗೊಂದಲ ವಿಚಾರ ಸಿಎಂ ಜೊತೆ ಸಮಾಲೋಚನೆ ಮಾಡಿ, ಅವರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ, ಇನ್ನೆರೆಡು ದಿನಗಳಲ್ಲಿ ನಿರ್ಧಾರವನ್ನು ಪ್ರಕಟಿಸುವ ಭರವಸೆಯನ್ನು ಶಿಕ್ಷಣ ಸಚಿವರು ನೀಡಿದರು.