ಕಲಬುರಗಿ: ರೈತರಿಗೆ ಅನುಕೂಲವಾಗಲೆಂದು ನೂರಾರು ಕೋಟಿ ರೂಪಾಯಿ ವ್ಯಯಿಸಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಆದರೆ ಭ್ರಷ್ಟಾಚಾರದಿಂದಾಗಿ ರೈತರ ಹೊಲ, ಗದ್ದೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ.
Advertisement
ಸುಮಾರು 800 ಹೆಕ್ಟರ್ ಭೂಮಿ ಹಾಗೂ ಈ ವರೆಗೆ 850 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಾಗರಾಳ ಡ್ಯಾಂ ನಿರ್ಮಿಸಲಾಗಿದೆ. ಇಷ್ಟು ಹಣ ಖರ್ಚಾದರೂ ರೈತರಿಗೆ ಮಾತ್ರ ಸಮರ್ಪಕ ನೀರು ಸಿಗುತ್ತಿಲ್ಲ. ಇದಕ್ಕೆ ಕಾರಣ ನೀರಾವರಿ ಇಲಾಖೆ ಅಧಿಕಾರಿಗಳ ಭ್ರಹ್ಮಾಂಡ ಭ್ರಷ್ಟಾಚಾರವೇ ಕಾರಣವಾಗಿದೆ.
Advertisement
Advertisement
25 ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಉದ್ದೇಶದಿಂದ 1974-75ರಲ್ಲಿ ಈ ಡ್ಯಾಂ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಯ್ತು. ಆಣೆಕಟ್ಟು ಕಾಮಗಾರಿ 2001 ರಲ್ಲಿಯೇ ಪೂರ್ಣಗೊಂಡಿದೆ. 80 ಕಿಲೋ ಮೀಟರವರೆಗೆ ಮುಖ್ಯ ಕಾಲುವೆ ಸಹ ನಿರ್ಮಿಸಲಾಗಿದೆ. ಆದರೆ ರೈತರ ಹೊಲಗಳಿಗೆ ನೀರುಣಿಸಲು ಉಪಕಾಲುವೆಗಳಾಗಿಲ್ಲ. ನಿರ್ಮಾಣವಾಗಿರುವ ಕೆಲ ಉಪಕಾಲುವೆಗಳು ಸಹ ಸಂಪೂರ್ಣ ಕಳಪೆ ಕಾಮಗಾರಿಯಿಂದ ಹಾಳಾಗಿದ್ದು, ನೀರು ಮುಂದೆ ಹರಿಯದಂತಾಗಿವೆ. ಇದರಿಂದಾಗಿ ರೈತರ ಹೊಲಕ್ಕೆ ನೀರು ಸಿಗದಂತಾಗಿದೆ.
Advertisement
ಡ್ಯಾಂ ಅಡಿಯಲ್ಲಿದ್ದ ಕಲ್ಲು ಹಾಸು ಬಂಡೆಯನ್ನು ಬ್ಲಾಸ್ಟಿಂಗ್ ಮಾಡಿ ತೆಗೆದು, 40 ಕೋಟಿ ರೂ. ಖರ್ಚು ಮಾಡಿ ಅದರ ಮೇಲೆ ಅವೈಜ್ಞಾನಿಕವಾಗಿ ಕಾಂಕ್ರೀಟ್ ಬೆಡ್ ನಿರ್ಮಾಣ ಮಾಡಲಾಗಿದೆ. ಆದರೆ ಕಳೆದ ವರ್ಷ ಡ್ಯಾಂನಿಂದ ನೀರು ಬಿಟ್ಟ ನಂತರ ಬೆಡ್ ಸಂಪೂರ್ಣ ಕಿತ್ತುದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿ ನಿಂತಿದೆ. ಒಟ್ಟಾರೆ ನಾಗರಾಳ ಸೇರಿ ನಾಲ್ಕಾರು ಗ್ರಾಮಗಳು, 800 ಹೆಕ್ಟರ್ ಜಮೀನು ಈ ಡ್ಯಾಂಗಾಗಿ ಮುಳುಗಡೆಯಾಗಿದೆ. ಕನಿಷ್ಟ ಮುಳುಗಡೆ ಆದಷ್ಟು ಪ್ರದೇಶಕ್ಕಾದರೂ ನೀರು ದೊರೆಯದಿದ್ದರೆ ಪ್ರಯೋಜನವೇನು? ಈ ಯೋಜನೆ ಅಧಿಕಾರಿಗಳ ಪಾಲಿಗೆ ಹಣ ಮಾಡುವ ಎಟಿಎಂ ಯಂತ್ರವಾಗಿದೆ. ನಮಗೇನೂ ಪ್ರಯೋಜನವಿಲ್ಲ ಎಂದು ರೈತರು ಮತ್ತು ರೈತ ನಾಯಕರು ದೂರುತ್ತಿದ್ದಾರೆ.
ಡ್ಯಾಂ ಕಾಲುವೆಯ ಕಾಮಗಾರಿ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ಕಾಲುವೆಗಳು ಅತ್ಯಂತ ಕಳಪೆಯಾಗಿ ನಿರ್ಮಿಸಿ, ನೂರಾರು ಕೋಟಿ ಹಣ ಲಪಟಾಯಿಸಲಾಗಿದೆ ಎಂದು ಚಿಂಚೋಳಿ ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪುರ್ ದಾಖಲೆ ಸಮೇತ ಆರೋಪಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ರೈತರ ಜಮೀನಿಗೆ ನೀರು ಸಿಗುವಂತೆ ಸಮರ್ಪಕವಾಗಿ ಕಾಲುವೆ ನಿರ್ಮಿಸಲು ಆಗ್ರಹಿಸಿದ್ದಾರೆ.