ಗುವಾಹಟಿ: ಕಳ್ಳಬಟ್ಟಿ ಸಾರಾಯಿ ಸೇವಿಸಿ 80 ಮಂದಿ ಟೀ ಎಸ್ಟೇಟ್ ಕಾರ್ಮಿಕರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ದುರ್ಘಟನೆ ಪೂರ್ವ ಅಸ್ಸಾಂನ ಗೊಲ್ಘಾಟ್ ಹಾಗೂ ಜೊರ್ಹಟ್ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಸಲ್ಮರಾ ಟೀ ಎಸ್ಟೇಟ್‍ನಲ್ಲಿ ಕಾರ್ಮಿಕರು ಕಳ್ಳಬಟ್ಟಿ ಸಾರಾಯಿ ಸೇವಿಸಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಸ್ಥಳೀಯ ಸ್ವಾಹಿದ್ ಕುಶಾಲ್ ಕೊನ್ವಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇವರೆಗೆ ಚಿಕಿತ್ಸೆ ಫಲಕಾರಿಯಾಗದೇ 80 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
Advertisement
Advertisement
ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿರುವ ಅಸ್ವಸ್ಥ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಸುತ್ತಮುತ್ತಲಿನ ವೈದ್ಯಕೀಯ ಕಾಲೇಜುಗಳ ವೈದ್ಯರು ಕೂಡ ಆಗಮಿಸುತ್ತಿದ್ದಾರೆ. ಈ ಕುರಿತು ಅಸ್ಸಾಂ ಆರೋಗ್ಯ ಸಚಿವರು ಪ್ರತಿಕ್ರಿಯಿಸಿ, ಆಸ್ಪತ್ರೆಯಿಂದ ಪ್ರತಿ 10 ನಿಮಿಷಕ್ಕೊಮ್ಮೆ ನಾವು ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಅಸ್ಸಾಂನ ಗುವಾಹಟಿಯಲ್ಲಿಯಾದ ದುರಂತದಿಂದ ಬೇಸರವಾಗಿದೆ. ಮೃತರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು ಬೇಗನೇ ಚೇತರಿಸಿಕೊಳ್ಳಲಿ ಎಂದು ಸಂತಾಪ ಸೂಚಿಸಿದ್ದಾರೆ.
Advertisement
Advertisement
ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ವೇಳೆ ಗೊಲ್ಘಾಟ್‍ನ ದ್ರೌಪದಿ ಓರನ್ (65) ಹಾಗೂ ಆಕೆಯ ಮಗ ಸಂಜು ಓರಾನ್ ಮನೆಯಲ್ಲಿ ಕಳ್ಳಬಟ್ಟಿಯನ್ನು ತಯಾರಿಸಲಾಗಿತ್ತು. ಅಲ್ಲದೆ ಈ ಘಟನೆಯಲ್ಲಿ ತಾಯಿ, ಮಗ ಇಬ್ಬರೂ ಕೂಡ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೋರ್ಹಟ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ಮಿಕರಲ್ಲಿ 9 ಮಂದಿ ಮಹಿಳೆಯರು ಹಾಗೂ 11 ಮಂದಿ ಪುರುಷರು ಸಾವನ್ನಪ್ಪಿದ್ದಾರೆ. ಟೀ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಅವರ ವಾರದ ಸಂಬಳ ದೊರಕಿತ್ತು ಆದರಿಂದ ಅವರು ಮದ್ಯಪಾನ ಮಾಡಿದ್ದಾರೆ. ಆಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv