ಲಕ್ನೋ: ಯಾತ್ರಿಕರನ್ನು (Pilgrims) ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ (Tractor-Trolley) ಟ್ರಕ್ (Truck) ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಯಾತ್ರಿಕರು ಸಾವನ್ನಪ್ಪಿದ್ದು, 43 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್ (Bulandshahr) ಜಿಲ್ಲೆಯಲ್ಲಿ ನಡೆದಿದೆ.
ಅರ್ನಿಯಾ ಬೈಪಾಸ್ ಬಳಿಯ ಬುಲಂದ್‌ಶಹರ್-ಅಲಿಗಢ ಗಡಿಯಲ್ಲಿ ಸೋಮವಾರ ನಸುಕಿನ ಜಾವ 2:10ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡಿರುವ ಯಾತ್ರಿಕರ ಪೈಕಿ 12 ಮಂದಿ ಅಪ್ರಾಪ್ತರಾಗಿದ್ದಾರೆ. ಕ್ಯಾಂಟರ್ ಟ್ರಕ್ ಹಿಂದಿನಿಂದ ಟ್ರ‍್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಪಲ್ಟಿಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: Shivamogga | ತಾನೇ ಜನ್ಮ ನೀಡಿದ ನವಜಾತ ಶಿಶುವಿನ ಕತ್ತು ಕೊಯ್ದು ಕೊಂದಿದ್ದ ಲೇಡಿ ಅರೆಸ್ಟ್
ಟ್ರಾಕ್ಟರ್ ಟ್ರಾಲಿಯಲ್ಲಿ 61 ಜನರು ಇದ್ದರು. ಯಾತ್ರಿಕರು ಕಾಸ್ಗಂಜ್ ಜಿಲ್ಲೆಯ ರಫತ್‌ಪುರ ಗ್ರಾಮದಿಂದ ರಾಜಸ್ಥಾನದ ಜಹರ್‌ಪೀರ್‌ಗೆ ತೀರ್ಥಯಾತ್ರೆಗಾಗಿ ಪ್ರಯಾಣಿಸುತ್ತಿದ್ದರು. 10 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 10 ಮಂದಿ ಗಾಯಾಳುಗಳನ್ನು ಅಲಿಘರ್ ವೈದ್ಯಕೀಯ ಕಾಲೇಜಿಗೆ, ಇನ್ನೂ 10 ಜನರನ್ನು ಬುಲಂದ್‌ಶಹರ್ ಜಿಲ್ಲಾ ಆಸ್ಪತ್ರೆಗೆ ಮತ್ತು 23 ಮಂದಿಯನ್ನು ಖುರ್ಜಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿ| ದೇವಸ್ಥಾನದ ಜಾಗಕ್ಕಾಗಿ ಕೊಲೆ – ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟ
ಮೃತರನ್ನು ಟ್ರ‍್ಯಾಕ್ಟರ್ ಚಾಲಕ ಇ.ಯು. ಬಾಬು (40), ರಾಂಬೆಟಿ (65), ಚಾಂದನಿ (12), ಘನಿರಾಮ್ (40), ಮೋಕ್ಷಿ (40), ಶಿವಾಂಶ್ (6), ಯೋಗೇಶ್ (50) ಮತ್ತು ವಿನೋದ್ (45) ಎಂದು ಗುರುತಿಸಲಾಗಿದ್ದು, ಎಲ್ಲರೂ ಕಾಸ್ಗಂಜ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರುತಿ, ಎಸ್‌ಎಸ್‌ಪಿ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ