ಗುವಾಹಟಿ: 35 ವರ್ಷದ ಮಹಿಳೆಯ ಮೇಲೆ ಆಕೆಯ ಪತಿಯ ಮುಂದೆಯೇ 8 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ನಡೆದಿದೆ.
ನಡೆದಿದ್ದೇನು?
ಗುರುವಾರ ದಂಪತಿ ಕಂಪುರ್ ನಿಂದ ಹೊಜೈಗೆ ಪ್ರಯಾಣಿಸುತ್ತಿದ್ದರು. ಆದರೆ ಚಾಪರ್ಮುಖ್ ತಲುಪಿದ ಬಳಿಕ ಅವರು ಹೊಜೈಗೆ ಹೋಗಲು ಯಾವುದೇ ವಾಹನಗಳು ಇರಲಿಲ್ಲ. ಈ ವೇಳೆ ಮುಖ್ಯ ಆರೋಪಿ ಮರ್ಜೋತ್ ಅಲ್ಲಿಗೆ ಬಂದು ಇಂದು ರಾತ್ರಿ ನೀವು ಉಳಿದುಕೊಳ್ಳಲು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಅವರನ್ನು ಕಾಕೋಟಿಗಾಂವ್ ಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ಅಲ್ಲಿಗೆ ಹೋಗುವಷ್ಟರಲ್ಲಿ ಕೊಪಿಲಿ ನದಿಯ ಹತ್ತಿರ ಈಗಾಗಲೇ ಇತರೆ ಏಳು ಮಂದಿ ಆರೋಪಿಗಳು ಕಾಯುತ್ತಿದ್ದರು. ನಂತರ ಅವರು ಸಂತ್ರಸ್ತೆಯ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಆತನ ಮುಂದೆಯೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ದಂಪತಿ ಬಳಿ ದರೋಡೆ ಮಾಡಿ ಅವರನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ನಾವು ಆರೋಪಿಗಳನ್ನು ವಿಚಾರಣೆ ಮಾಡಲು ಹೆಚ್ಚು ಸಮಯ ಬೇಕಾಗಬಹುದು. ಈ ಘಟನೆ ಗುರುವಾರ ನಡೆದಿದ್ದು, ಸದ್ಯಕ್ಕೆ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ ಎಂದು ನಾಗಾನ್ ಎಸ್.ಪಿ. ಶಂಕರ್ ಬರಾತಾ ರೈಮೇಧಿ ಹೇಳಿದ್ದಾರೆ.