ನವದೆಹಲಿ: ಗಂಭೀರವಾಗಿ ಗಾಯಗೊಂಡಿದ್ದ 8 ಅಡಿ ಉದ್ದದ ಹೆಬ್ಬಾವು ಚಿಕಿತ್ಸೆ ವೇಳೆ ಕಂಪ್ಯೂಟೆಡ್ ಟೊಮೊಗ್ರಪಿ/ಸಿಟಿ ಸ್ಕ್ಯಾನ್‍ಗೆ ಒಳಪಟ್ಟ ಘಟನೆ ಭಾನುವಾರದಂದು ಭುವನೇಶ್ವರ್‍ನಲ್ಲಿ ನಡೆದಿದೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಈ ಹಾವಿನ ಸಿಟಿ ಸ್ಕ್ಯಾನ್ ಬಹುಶಃ ಭಾರತದಲ್ಲಿ ಇದೇ ಮೊದಲು ಎಂದು ಉರಗ ರಕ್ಷಕ ಸುಭೇಂದು ಮಲ್ಲಿಕ್ ಹೇಳಿದ್ದಾರೆ. 4 ದಿನಗಳ ಹಿಂದೆ ಭುವನೇಶ್ವರದಿಂದ 130 ಕಿ.ಮೀ ದೂರದಲ್ಲಿರುವ ಕಿಯೊಂಜಾರ್ ಜಿಲ್ಲೆಯ ಆನಂದಪುರ್‍ನಲ್ಲಿ ಗಾಯಗೊಂಡಿದ್ದ ಹಾವು ಪತ್ತೆಯಾಗಿತ್ತು. ಅರಣ್ಯ ಇಲಾಖೆಯವರು ಹಾವನ್ನ ರಕ್ಷಣೆ ಮಾಡಿದ್ದರು. ಒಡಿಶಾದಲ್ಲಿ ಹಾವುಗಳ ರಕ್ಷಣೆ ಹಾಗೂ ಅವುಗಳ ಆರೋಗ್ಯದ ಉದ್ದೇಶದಿಂದ ನಿರ್ಮಿಸಲಾಗಿರೋ 60 ಸದಸ್ಯರ ಸ್ನೇಕ್ ಹೆಲ್ಪ್‍ಲೈನ್ ಸಂಸ್ಥೆಗೆ ಹಾವನ್ನ ಒಪ್ಪಿಸಲಾಗಿತ್ತು.
ಶುಕ್ರವಾರದಂದು ರೇಂಜ್ ಆಫೀಸರ್ ಮಿಹಿರ್ ಪಟ್ನಾಯ್ಕ್ ಗಂಭೀರವಾಗಿ ಗಾಯಗೊಂಡಿದ್ದ ಹಾವನ್ನ ಒಡಿಶಾ ಕೃಷಿ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯದ ಪಶುವೈದ್ಯ ವಿಜ್ಞಾನ ಕಾಲೇಜಿಗೆ ತಂದಿದ್ರು. ಮೊದಲು ಎಕ್ಸ್‍ರೇ ತೆಗೆದಾಗ ಹಾವಿಗೆ ಆಗಿರುವ ಗಾಯದ ಬಗ್ಗೆ ಹೆಚ್ಚಾಗಿ ತಿಳಿಯಲಿಲ್ಲ. ಹೀಗಾಗಿ ಹಾವನ್ನ ಸ್ನೇಕ್ ಹೆಲ್ಪ್‍ಲೈನ್‍ನವರು ನೋಡಿಕೊಳ್ತಿದ್ರು.
ವೈದ್ಯಕೀಯ ಪುಸ್ತಕಗಳನ್ನ ಓದಿ, ಸಾಕಷ್ಟು ಸಂಶೋಧನೆ ನಡೆಸಿದ ನಂತರ ಹಾವಿನ ಗಾಯದ ಬಗ್ಗೆ ತಿಳಿದುಕೊಳ್ಳಲು ಸಿಟಿ ಸ್ಕ್ಯಾನ್ ಮಾಡಲು ನಿರ್ಧರಿಸಲಾಯಿತು ಎಂದು ಮಲ್ಲಿಕ್ ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗೆಳಲ್ಲಿ ಈ ಸೌಲಭ್ಯವಿಲ್ಲದ ಕಾರಣ ಸಿಟಿ ಸ್ಕ್ಯಾನ್‍ಗಾಗಿ ಹಾವನ್ನ ಒಳಗೆ ತರಲು ಖಾಸಗಿ ಕ್ಲಿನಿಕ್‍ವೊಂದರ ವೈದ್ಯರ ಮನವೊಲಿಸಿದೆವು. ನಂತರ ಅಷ್ಟು ಉದ್ದದ ಹಾವಿನ ಸಿಟಿ ಸ್ಕ್ಯಾನ್ ಸ್ಪಷ್ಟವಾಗಿ ಪಡೆಯಬೇಕಾದ್ರೆ ಅದನ್ನ ಅಲುಗಾಡದಂತೆ ನೋಡಿಕೊಳ್ಳುವುದು ಹೇಗೆ ಎಂಬುದು ಸವಾಲಾಗಿತ್ತು. ವಿದೇಶಗಳಲ್ಲಿ ಹೆಬ್ಬಾವುಗಳಿಗೆ ಅರವಳಿಕೆ ಕೊಟ್ಟ ಪ್ರಕರಣಗಳು ಇವೆ. ಆದ್ರೂ ಭಾರತದಲ್ಲಿ ಅದನ್ನು ಮಾಡಲು ನಮಗೆ ಭಯವಾಗಿತ್ತು. ಇಷ್ಟೆಲ್ಲಾ ಗೊಂದಲದ ನಂತರ ಮೆಡಿಕಲ್ ಟೇಪ್ ಬಳಸಿ ಹಾವನ್ನ ಹಿಡಿದುಕೊಳ್ಳಲು ನಿರ್ಧರಿಸಿದೆವು. ಸಿಟಿ ಸ್ಕ್ಯಾನ್‍ನಿಂದ ಹೆಬ್ಬಾವಿನ ಆಂತರಿಕ ಗಾಯಗಳ ಬಗ್ಗೆ ಗೊತ್ತಾಯಿತು. ತಲೆಯ ಭಾಗದಲ್ಲೂ ಗಂಭೀರ ಪೆಟ್ಟಾಗಿತ್ತು ಎಂದು ಅವರು ಹೇಳಿದ್ದಾರೆ.
ಮುಂದೆ ಇದರ ಪ್ರತಿಯನ್ನು ಅಂತಾರಾಷ್ಟ್ರೀಯ ತಜ್ಞರಿಗೆ ಕಳಿಸಿ ಅವರ ಮಾರ್ಗದರ್ಶನದಂತೆ ಮುಂದಿನ ಹೆಜ್ಜೆಯಿಡಬೇಕೆಂದುಕೊಂಡಿದ್ದೇನೆ ಎಂದು ಮಲ್ಲಿಕ್ ತಿಳಿಸಿದ್ದಾರೆ. ಹೆಬ್ಬಾವಿಗೆ ಚಿಕಿತ್ಸೆ ಮುಂದುವರೆಯಲಿದೆ ಎಂದು ವರದಿಯಾಗಿದೆ.