ಚೆನ್ನೈ: ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತಮಿಳುನಾಡು ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ (Armstrong) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಚೆನ್ನೈ ಹೆಚ್ಚುವರಿ ಆಯುಕ್ತ (ಉತ್ತರ) ಆಸ್ರಾ ಗರ್ಗ್ ಐಪಿಎಸ್ ಖಚಿತಪಡಿಸಿದ್ದು, ಹತ್ಯೆಯ ಹಿಂದಿನ ಉದ್ದೇಶವನ್ನು ತಿಳಿಯಲು ವಶಕ್ಕೆ ಪಡೆದುಕೊಂಡವರನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಆರ್ಮ್‌ಸ್ಟ್ರಾಂಗ್ ಅವರನ್ನು ಚೆನ್ನೈನ ಪೆರಂಬೂರ್ ಪ್ರದೇಶದಲ್ಲಿನ ಅವರ ನಿವಾಸದ ಬಳಿ ಬೈಕಿನಲ್ಲಿ ಬಂದ ಆರು ಮಂದಿ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯ ಬಳಿಕ ಆರ್ಮ್‌ಸ್ಟ್ರಾಂಗ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆರ್ಮ್‌ಸ್ಟ್ರಾಂಗ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ತಮಿಳುನಾಡಿನ ಬಿಎಸ್‌ಪಿ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ!
ಪ್ರಕರಣ ಸಂಬಂಧ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ರಾಜ್ಯದಲ್ಲಿ ಅದರ ಪ್ರಸ್ತುತತೆಗಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪಕ್ಷವಾದ ಡಿಎಂಕೆ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.