ಹುಬ್ಬಳ್ಳಿ: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿ ಪದೇ ಪದೇ ಪೊಲೀಸರಿಗರ ಚಳ್ಳೆ ಹಣ್ಣು ತಿನಿಸಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಅಂದರ್ ಆಗಿದ್ದಾನೆ.
ಬಸವರಾಜ ಕುರಡಗಿಮಠ ಬಂಧಿತ ಆರೋಪಿ. ಕೇಶ್ವಾಪುರ ಠಾಣೆಯ ಪೊಲೀಸರು ಈತನನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಂದ ಒಟ್ಟು ಎಂಟು ಜನ ಪೊಲೀಸರು ನೌಕರಿಯನ್ನು ಕಳೆದುಕೊಂಡಿದ್ದಾರೆ. 48 ವರ್ಷದ ಈತ 2014ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಅಲ್ಲಿಂದ ಕಿಮ್ಸ್ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಪರಾರಿಯಾಗಿದ್ದ. ಆಗ ನಾಲ್ವರು ಪೊಲೀಸರು ಅಮಾನತುಗೊಂಡಿದ್ದರು.
ನಂತರ ಮತ್ತೆ ಆತನ ಬಂಧನವಾಗಿತ್ತು. ಈ ಘಟನೆಯ ನಂತರ ಮತ್ತೆ ಜೈಲಿನಲ್ಲಿದ್ದ ಬಸವರಾಜ ಕುರಡಗಿಮಠ, ಅನಾರೋಗ್ಯದ ನೆಪವೊಡ್ಡಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಮತ್ತೆ ಅಲ್ಲಿಂದಲೂ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆಗಲೂ ನಾಲ್ಕು ಪೊಲೀಸರು ಅಮಾನತುಗೊಂಡಿದ್ದರು.
ಅಂದಿನಿಂದ ತಲೆಮರೆಸಿಕೊಂಡಿದ್ದ ಬಸವರಾಜನನನ್ನು ಹುಡುಕುತ್ತಿದ್ದ ಪೊಲೀಸರಿಗೆ ಆತ ಕಳೆದ ಒಂದು ವರ್ಷದಿಂದಲೂ ಚಳ್ಳೆಹಣ್ಣು ತಿನಿಸುತ್ತಿದ್ದ. ಆದರೆ ಕೇಶ್ವಾಪುರ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಕುಂಬಾರ ಅವರ ತಂಡ, ಮಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ಹಲವೆಡೆ ಹುಡುಕಾಡಿ, ಕೊನೆಗೆ ಮೈಸೂರಿನಲ್ಲಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.