ತುಮಕೂರು: ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಮಹಾಯೋಗಿಗಳು (Shivakumara Swamiji) ಲಿಂಗೈಕ್ಯರಾಗಿ ನಾಳೆಗೆ 7 ವರ್ಷ. ಈ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ನಾಳೆ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ನಡೆಯಲಿದೆ. ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ (CP Radhakrishnan) ಕಾರ್ಯಕ್ರಮದಲ್ಲಿ ಭಾಗಿಯಾಗೋದು ವಿಶೇಷ.
ಕಾರ್ಯಕ್ರಮದ ನಿಮಿತ್ತ ಸಿದ್ದಗಂಗಾ ಮಠದಲ್ಲಿ ಸರ್ವತಯಾರಿ ಭರದಿಂದ ಸಾಗಿದೆ. ನಾಳೆ ಬೆಳಗ್ಗೆ 10:50ಕ್ಕೆ ಮಠಕ್ಕೆ ಆಗಮಿಸಲಿರುವ ಉಪರಾಷ್ಟ್ರಪತಿಗಳು ಮೊದಲು ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 11 ಗಂಟೆಗೆ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 1 ಗಂಟೆಯ ವೇದಿಕೆ ಕಾರ್ಯಕ್ರಮದ ಬಳಿಕ 12 ಗಂಟೆಗೆ ಉಪರಾಷ್ಟ್ರಪತಿಗಳು ವಾಪಸ್ ತೆರಳಲಿದ್ದಾರೆ. ಉಪ ರಾಷ್ಟ್ರಪತಿಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ವಿ ಸೋಮಣ್ಣ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆಗೆ ಅವಮಾನ – ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ
ಉಪ ರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಇನ್ನು ಮಠದಲ್ಲಿ ನಾಳೆ ಬೆಳಗ್ಗೆ 5 ಗಂಟೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಶಿವಕುಮಾರ ಶ್ರೀಗಳ ಗದ್ದಿಗೆಗೆ ಮಂತ್ರಘೋಷಗಳ ಮೂಲಕ ವಿಶೇಷ ಪೂಜೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ರುದ್ರಾಕ್ಷಿ ಮಂಟಪದಲ್ಲಿ ಮೆರವಣಿಗೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮಿಜಿ, ಸದ್ಗುರು ಶ್ರೀ ಮಧುಸೂದನ ಸಾಯಿ, ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಇದನ್ನೂ ಓದಿ: ಲಕ್ಕುಂಡಿ ನಿಧಿ ಸಿಕ್ಕ ಗ್ರಾಮದಲ್ಲಿ ಮನೆಯೊಳಗೆ ದೇವಸ್ಥಾನ


