Connect with us

Bengaluru City

ಬಿಎಸ್‍ವೈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರನ್ನು ಹೊಗಳಿದ ರಾಜನಾಥ್ ಸಿಂಗ್

Published

on

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಸಿಎಂ ಯಡಿಯೂರಪ್ಪನವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಹೊಗಳಿದ್ದಾರೆ.

ಯಡಿಯೂರಪ್ಪನವರ ಈ ಕಾರ್ಯಕ್ರಮಕ್ಕೆ ಬಂದು ಖುಷಿಯಾಯ್ತು ಎಂದು ಸಿದ್ದರಾಮಯ್ಯ ನನ್ನ ಜೊತೆ ಹೇಳಿದರು. ಇದು ನಿಜವಾದ ಪ್ರಜಾಪ್ರಭುತ್ವ. ಎಲ್ಲಾ ಪಕ್ಷದವರು ರಾಜಕೀಯವಾಗಿ ಮೀರಿ ಸಂಬಂಧವನ್ನು ಇಟ್ಟುಕೊಳ್ಳಬೇಕು. ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯರ ಉಪಸ್ಥಿತಿ ಇದು ಸ್ವಸ್ಥ ರಾಜಕಾರಣದ ಸಂಕೇತ ಎಂದು ಹೇಳಿ ರಾಜನಾಥ್ ಸಿಂಗ್ ಸಿದ್ದರಾಮಯ್ಯನವರ ಸ್ನೇಹವನ್ನು ಪ್ರಶಂಸಿದರು.

ಸಮಾರಂಭದಲ್ಲಿ ರಾಜನಾಥ್ ಸಿಂಗ್ ಅವರಿಗೆ ಸಿದ್ದರಾಮಯ್ಯ ಭಾಷಾಂತರಕಾರರಾಗಿಯೂ ಕೆಲಸ ಮಾಡಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡುತ್ತಿದ್ದರು. ಈ ವೇಳೆ ಸುರೇಶ್ ಕುಮಾರ್ ಹೇಳುತ್ತಿದ್ದ ವಿಚಾರವನ್ನು ಸಿದ್ದರಾಮಯ್ಯ ಅವರು ರಾಜನಾಥ್ ಸಿಂಗ್ ಅವರಿಗೆ ತಿಳಿಸುತ್ತಿದ್ದರು.

ತಮ್ಮ ಭಾಷಣದಲ್ಲಿ ರಾಜನಾಥ್ ಸಿಂಗ್, ರಾಜ್ಯದಲ್ಲಿ ಪಕ್ಷ ಬೆಳೆಸಿದ ಯಡಿಯೂರಪ್ಪ ರೈತರು, ಬಡವರು, ಶೋಷಿತರ ಪರ ಇರುವ ನಾಯಕ. ಯಡಿಯೂರಪ್ಪ ಹುಟ್ಟು ಹೋರಾಟಗಾರರಾಗಿದ್ದು ಅವರನ್ನು ನಾನು ಒಬ್ಬ ಹೋರಾಟಗಾರನ ದೃಷ್ಟಿಯಿಂದಲೇ ಸದಾ ನೋಡುತ್ತೇನೆ. ಯಡಿಯೂರಪ್ಪ ಮೇಲೆ ಆರೋಪ ಬಂದು ಸಿಎಂ ಸ್ಥಾನ ತ್ಯಾಗ ಮಾಡಬೇಕಾಯ್ತು. ಆದರೆ ಕಿಂಚಿತ್ತೂ ಹಿಂಜರಿಯದೇ ಯಡಿಯೂರಪ್ಪ ಸಿಎಂ ಸ್ಥಾನದ ತ್ಯಾಗ ಮಾಡಿದರು ಎಂದು ಹೇಳಿದರು.

ಯಡಿಯೂರಪ್ಪ ಆರ್ಥಿಕ ಸಚಿವರಾಗಿ ಸಾಕಷ್ಟು ರೈತಪರ ಯೋಜನೆ ತಂದರು. ರೈತರಿಗೆ ಮೊದಲ ಬಾರಿಗೆ ಶೇ.4ರ ಬಡ್ಡಿಯಲ್ಲಿ ಸಾಲ ವಿತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಳಿಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವವರೆಗೆ ಆ ಯೋಜನೆ ಯಶಸ್ವಿಯಾಗಿ ಸಾಗಿತು. ಶೂನ್ಯ ಬಂಡವಾಳ ಕೃಷಿ ಕುರಿತು ಮೊದಲ ಸಲ ಚರ್ಚೆ ಮಾಡಿದ್ದೇ ಯಡಿಯೂರಪ್ಪ. ಯಡಿಯೂರಪ್ಪ ಮೊದಲ ಸಲ ಈ ಬಗ್ಗೆ ಮಾತಾಡಿದ್ದ ಪರಿಣಾಮ ಕೇಂದ್ರ ಬಜೆಟಿನಲ್ಲಿ ಶೂನ್ಯ ಬಂಡವಾಳ ಕೃಷಿ ಯೋಜನೆ ಸೇರ್ಪಡೆ ಮಾಡಲಾಯಿತು ಎಂದು ನೆನಪು ಮಾಡಿಕೊಂಡರು.

ಯಡಿಯೂರಪ್ಪ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರು ಶ್ರಮಜೀವಿ, ನಿಜವಾದ ಜನಸೇವಕ. ಅವರ ಜನಸೇವೆಯೇ ಅವರ ಯಶಸ್ಸಿಗೆ ಕಾರಣ. ಕ್ರಿಕೆಟಿನಲ್ಲಿ 77 ರನ್ ಬಾರಿಸಿದವನ ಮೇಲೆ ನಿರೀಕ್ಷೆ ಸಹಜ. ಆತ ಸೆಂಚುರಿ ಬಾರಿಸಲಿ ಎನ್ನುವ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿರುತ್ತಾರೆ. ಹೀಗಾಗಿ ಯಡಿಯೂರಪ್ಪನವರು ಸಹ ನೂರು ವರ್ಷ ಆರೋಗ್ಯದಿಂದ ಬಾಳಲಿ ಎಂದು ರಾಜನಾಥ್ ಸಿಂಗ್ ಶುಭ ಹಾರೈಸಿದರು.

 

Click to comment

Leave a Reply

Your email address will not be published. Required fields are marked *