ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ

ನವದೆಹಲಿ: ದೇಶದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿದ್ದು, ಈ ಸಂಭ್ರಮಾಚರಣೆ ಮೇಲೆ ಭಯೋತ್ಪಾದಕರ ಕರಿ ನೆರಳು ಬಿದ್ದಿದೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ವೇಳೆ ಭಯೋತ್ಪಾದಕ ಚಟುವಟಿಕೆಗಳು ನಡೆಯುವ ಬೆದರಿಕೆಗಳು ಬಂದಿದೆ.
ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ ಸಂಘಟನೆಗಳಿಂದ ಸಂಭವನೀಯ ದಾಳಿಗಳ ಬಗ್ಗೆ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಬಂದಿದ್ದು ಕೆಂಪುಕೋಟೆಯ ಸುತ್ತ ಭದ್ರತೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಕೆಂಪುಕೋಟೆಯ ಸುತ್ತ ಭಾರಿ ಭದ್ರತೆ ನಿಯೋಜಿಸಲು ಸಿದ್ದತೆಗಳು ಆರಂಭಗೊಂಡಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೆಂಪುಕೋಟೆಗೆ ಸಿಸಿಟಿವಿ ಸರ್ಪಗಾವಲು ಹಾಕಲು ತಿರ್ಮಾನಿಸಿದ್ದು, 1,000 ಕ್ಕೂ ಇಂಟರ್ನೆಟ್ ಪ್ರೊಟೊಕಾಲ್ (IP) ಆಧಾರಿತ ಸಿಸಿಟಿವಿಗಳ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ. 2 ಮೆಗಾ ಪಿಕ್ಸೆಲ್‌ನ 80% IP ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಕೆಂಪುಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಸುಮಾರು 20%ನಷ್ಟು 4 ಮೆಗಾಫಿಕ್ಸೆಲ್‌ನ IP ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಕೋಟೆಯ ಆವರಣದೊಳಗೆ ಅಳವಡಿಕೆಗೆ ಚಿಂತಿಸಿದೆ.
ಇಂಟರ್ನೆಟ್ ಪ್ರೊಟೊಕಾಲ್ ಸಿಸಿಟಿವಿ ಕ್ಯಾಮೆರಾಗಳು ಹೆಚ್ಚು ಸ್ಪಷ್ಟತೆ ಹೊಂದಿದ್ದು, ದೃಶ್ಯಗಳಲ್ಲಿ ವಿಶೇಷ ಜೂಮ್ ವ್ಯವಸ್ಥೆ ಹೊಂದಿದೆ. ಅಲ್ಲದೇ ಇದರಲ್ಲಿ ಮುಖ, ಧ್ವನಿ ಪತ್ತೆ ಮಾಡುವ ಸಾಮರ್ಥ್ಯವೂ ಇದೆ. ಅನುಮಾನಾಸ್ಪದ ಜನರ ಚಲನೆಯನ್ನು ಸುಲಭವಾಗಿ ಈ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚಬಹುದಾಗಿದೆ. ಇನ್ನು ಎಂದಿಗಿಂತ ಹೆಚ್ಚು ಪೊಲೀಸ್ ಭದ್ರತೆಯೂ ಇರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್ ಹೆಸರು ಶಿಫಾರಸು