ನವದೆಹಲಿ: ದೇಶದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ NEET-UG ಪರೀಕ್ಷೆಯಲ್ಲಿ ಗ್ರೇಸ್ ಅಂಕ ಪಡೆದಿದ್ದ 1,563 ವಿದ್ಯಾರ್ಥಿಗಳ ಪೈಕಿ 813 ಮಂದಿ ಮರು ಪರೀಕ್ಷೆಗೆ (Re Exam) ಹಾಜರಾಗಿದ್ದು 750 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ತಿಳಿಸಿದೆ.
ಇಂದು ಒಟ್ಟು ಛತ್ತೀಸ್‌ಗಢ, ಗುಜರಾತ್, ಹರ್ಯಾಣ, ಮೇಘಾಲಯ, ಚಂಡೀಗಢ ಪರೀಕ್ಷಾ ಕೇಂದ್ರಗಳಲ್ಲಿ ಮರು ಪರೀಕ್ಷೆ ನಡೆಸಲಾಯಿತು.
ಎಲ್ಲಿ ಎಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ?
ಚಂಡೀಗಢ – ಇಬ್ಬರು ಹಾಜರಾಗಬೇಕಿತ್ತು, ಇಬ್ಬರು ಗೈರಾಗಿದ್ದಾರೆ.
ಛತ್ತೀಸ್‌ಗಢ – 602 ವಿದ್ಯಾರ್ಥಿಗಳ ಪೈಕಿ 311 ಮಂದಿ ಗೈರಾಗಿದ್ದರೆ 291 ಮಂದಿ ಪರೀಕ್ಷೆ ಬರೆದಿದ್ದಾರೆ.
ಗುಜರಾತ್ – ಓರ್ವ ವಿದ್ಯಾರ್ಥಿ ಹಾಜರಾಗಬೇಕಿತ್ತು, ವಿದ್ಯಾರ್ಥಿ ಹಾಜರಾಗಿದ್ದಾನೆ.
ಮೇಘಾಲಯ – 464 ವಿದ್ಯಾರ್ಥಿಗಳ ಪೈಕಿ 230 ಮಂದಿ ಗೈರಾಗಿದ್ದರೆ, 234 ಮಂದಿ ಹಾಜರಾಗಿದ್ದಾರೆ.
NEET-UG ಪರೀಕ್ಷೆ ವೇಳೆ ಅಕ್ರಮ ಎಸಗಿದ ಆರೋಪದ ಮೇಲೆ ಮೇಲೆ ದೇಶಾದ್ಯಂತ 63 ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು NTA ಹೇಳಿದೆ. ಅವರಲ್ಲಿ ಬಿಹಾರದಿಂದ 17 ಮತ್ತು ಗೋದ್ರಾದ 30 ಮಂದಿ ಸೇರಿದ್ದಾರೆ. ಇದನ್ನೂ ಓದಿ: ರೇವಣ್ಣ ಕುಟುಂಬಕ್ಕೆ ಕಾನೂನು ಸಂಕಷ್ಟ – ಯಾರ ವಿರುದ್ಧ ಏನೇನು ಪ್ರಕರಣ?
ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ ಪ್ರಶ್ನೆ ಪತ್ರಿಕೆ ತಡವಾಗಿ ಸಿಕ್ಕಿದ್ದ 1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಗ್ರೇಸ್ ಅಂಕದ ವಿವಾದ ದೇಶಾದ್ಯಂತ ಹರಡುತ್ತಿದ್ದಂತೆ ಕೇಂದ್ರ ಸರ್ಕಾರ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. 1,563 ಅಭ್ಯರ್ಥಿಗಳಲ್ಲಿ ಯಾರಾದರೂ ಮರುಪರೀಕ್ಷೆಯಿಂದ ಹೊರಗುಳಿದಿದ್ದರೆ ಗ್ರೇಸ್ ಅಂಕಗಳಿಲ್ಲದ ಅವರ ಹಿಂದಿನ ಅಂಕಗಳನ್ನು ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ತಿಳಿಸಿತ್ತು. ಅದರಂತೆ ಇಂದು ಪರೀಕ್ಷೆ ನಡೆಸಿದ್ದು, ಜೂನ್ 30ರೊಳಗೆ ಫಲಿತಾಂಶ ಪ್ರಕಟಿಸಲಿದೆ.