ಜೈಪುರ: ರಾಜಸ್ಥಾನ ಮೂಲದ 75 ವರ್ಷದ ಮಹಿಳೆಯೊಬ್ಬರು ಐವಿಎಫ್ ವಿಧಾನದ ಮೂಲಕ ಶನಿವಾರ ತಡರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿಯನ್ನು ಕೋಟಾದ ಕಿಂಕರ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ತೂಕ ಕೇವಲ 600 ಗ್ರಾಂ ಇದ್ದು, ನವಜಾತ ಶಿಶುವನ್ನು ಮತ್ತೊಂದು ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಗಿದೆ, ಶಿಶುವೈದ್ಯರ ತಂಡ ಹೆಣ್ಣು ಮಗುವನ್ನು ನೋಡಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಾಯಿಯ ವಯಸ್ಸಿನಿಂದಾಗಿ, ಅವರು ಗರ್ಭಧರಿಸಿದ 6.5 ತಿಂಗಳ ನಂತರ ಸಿಸೇರಿಯನ್ ಮಾಡಿದ್ದಕ್ಕೆ ಮಗು ಅಕಾಲಿಕವಾಗಿ ಜನ್ಮ ಪಡೆದಿದೆ.
Advertisement
Advertisement
ಒಂದೆಡೆ ತಾಯಿ ದೈಹಿಕವಾಗಿ ದುರ್ಬಲರಾಗಿದ್ದು, ಇನ್ನೊಂದೆಡೆ ಅವರಿಗೆ ಕೇವಲ ಒಂದು ಶ್ವಾಸಕೋಶವಿತ್ತು ಹೀಗಾಗಿ ಈ ವಯಸ್ಸಿನಲ್ಲಿ ಅವರು ಮಗುವನ್ನು ಹೆರುವುದು ಅವರಿಗೆ ಮಾತ್ರವಲ್ಲ ವೈದ್ಯ ತಂಡಕ್ಕೂ ಸವಾಲಾಗಿತ್ತು ಎಂದು ಖಾಸಗಿ ಆಸ್ಪತ್ರೆಯ ವೈದ್ಯರಾದ ಅಭಿಲಾಶಾ ಕಿಂಕರ್ ತಿಳಿಸಿದರು.
Advertisement
Advertisement
ಮಹಿಳೆ ಗ್ರಾಮೀಣ ಕೃಷಿ ಕುಟುಂಬಕ್ಕೆ ಸೇರಿದವರಾಗಿದ್ದು, ಮಕ್ಕಳಿಲ್ಲದ ಕಾರಣ ಮಹಿಳೆ ಈ ಮೊದಲು ಮಗುವನ್ನು ದತ್ತು ಪಡೆದಿದ್ದಾರೆ. ಆದರೆ ಅವರಿಗೆ ತಮ್ಮ ಸಂತಾನ ಪಡೆಯಬೇಕು ಎಂಬ ಆಸೆ ಇತ್ತು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ತಾವು ತಾಯಿ ಆಗುವ ಸಾಧ್ಯತೆಗಳ ಬಗ್ಗೆ ತಪಾಸಣೆ ನಡೆಸಿದ್ದರು. ಬಳಿಕ ಐವಿಎಫ್ ವಿಧಾನವನ್ನು ಪ್ರಯತ್ನಿಸಿ ಮಗು ಪಡೆಯಲು ಮುಂದಾದರು. ಇದು ನಮ್ಮೆಲ್ಲರಿಗೂ ಒಂದು ರೀತಿಯ ಸವಾಲಾಗಿತ್ತು ಎಂದು ವೈದ್ಯರು ಹೇಳಿದರು.
ಈ ಹಿಂದೆ ಆಂಧ್ರಪ್ರದೇಶದ ಗುಂಟೂರು ನಗರದಲ್ಲಿ 74 ವರ್ಷದ ವೃದ್ಧೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಇಳಿ ವಯಸ್ಸಿನಲ್ಲಿ 2 ಮಕ್ಕಳಿಗೆ ಜನ್ಮನೀಡಿ ತಾವು ತಾಯಿಯಾಗುವ ಬಯಕೆಯನ್ನು ತೀರಿಸಿಕೊಂಡಿದ್ದರು.
ಹೌದು, ಈ ವಯಸ್ಸಿನಲ್ಲೂ ಮಗುವಿಗೆ ಜನ್ಮ ನೀಡೋದಾ ಎಂದು ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದ ನಿವಾಸಿ ಎರ್ರಮಟ್ಟಿ ಮಂಗಯಮ್ಮ(74) ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರ್ರಾಮಟಿ ರಾಜ ರಾವ್(80) ಹಾಗೂ ಮಂಗಯಮ್ಮ ಅವರು ಮಾರ್ಚ್ 22, 1962 ರಂದು ಮದುವೆಯಾಗಿದ್ದರು. ಆದರೆ ರಾಜ ರಾವ್ ಮತ್ತು ಮಂಗಯಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಬಹುವರ್ಷದಿಂದ ಮಕ್ಕಳನ್ನು ಪಡೆಯುವ ಆಸೆ ಹೊತ್ತಿದ್ದ ದಂಪತಿಯ ಕನಸು ಈಗ ನನಸಾಗಿದೆ. ಈ ಮೂಲಕ ಮಂಗಯಮ್ಮ ಹೊಸ ದಾಖಲೆ ಬರೆದಿದ್ದರು.