ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಮತ್ತು ರಾಜಭವನದ ಸಹಯೋಗದಲ್ಲಿ ಬುಧವಾರ ರಾಜಭವನದ ಅಂಗಳದಲ್ಲಿ 75 ಶ್ರೀಗಂಧದ ಸಸಿಗಳನ್ನು ನೆಡಲಾಯಿತು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಶ್ರೀಗಂಧ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ ಅನುರಾಧ, ಕೆಎಸ್‍ಎಫ್‍ಡಿಸಿ ಅಧಿಕಾರಿಗಳು, ರಾಜಭವನದ ಅಧಿಕಾರಿಗಳು ಸಹ ಶ್ರೀಗಂಧ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಿದರು.
ನಂತರ ಮಾತನಾಡಿದ ರಾಜ್ಯಪಾಲರು, ಶ್ರೀಗಂಧದ ನಾಡು ಎಂದೇ ಕರ್ನಾಟಕ ಪ್ರಸಿದ್ಧಿಯಾಗಿದೆ. ಶ್ರೀಗಂಧದಂತಹ ಸೊಗಡನ್ನು ಹೊಂದಿರುವ ಸುಂದರ ನಾಡಿನ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ರಾಜ್ಯದಲ್ಲಿರುವ ಅರಣ್ಯವನ್ನು ಸಂರಕ್ಷಿಸುವುದರ ಜೊತೆಯಲ್ಲೇ, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಗರ ಪ್ರದೇಶಗಳಲ್ಲೂ ಹೆಚ್ಚಾಗಿ ಗಿಡ ಮರಗಳನ್ನು ಬೆಳೆಸುವುದಕ್ಕೆ ಆದ್ಯತೆ ನೀಡಬೇಕು. ಇದರಿಂದ ನಗರಗಳಲ್ಲಿ ಹಸಿರು ಹೆಚ್ಚಾಗುವುದಲ್ಲದೆ, ಸೌಂದರ್ಯವೂ ಇಮ್ಮಡಿಯಾಗುತ್ತದೆ. 75 ಶ್ರೀಗಂಧದ ಮರಗಳನ್ನು ನೆಡುವ ಮೂಲಕ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಯ ಶ್ಲಾಘನೀಯವಾಗಿದೆ. ಬೇರೆ ಸಂಘ ಸಂಸ್ಥೆಗಳೂ ಕೂಡಾ ಇಂತಹ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಜನರನ್ನು ದಾರಿ ತಪ್ಪಿಸಬೇಡಿ: ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ಕಿಡಿ
ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗಾ ಯಶಸ್ವಿಯಾಗಿದೆ. ಈ ಸಂದರ್ಭವನ್ನು ಇನ್ನಷ್ಟು ವಿಶೇಷವಾಗಿ ಆಚರಿಸುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರಾಜಭವನದಲ್ಲಿ 75 ಶ್ರೀಗಂಧದ ಸಸಿಗಳನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಅಮೃತ ಹಸ್ತದಿಂದ ನೆಡಿಸಲಾಗಿದೆ. ಅಲ್ಲದೇ, ಶ್ರೀಗಂಧದ ಮರಗಳಿಗೆ ಸೂಕ್ತ ರಕ್ಷಣೆ ದೊರಕುವಂತಹ ಕಚೇರಿಗಳಲ್ಲೂ ಕೂಡಾ ಸಸಿಗಳನ್ನು ನೆಡುವ ಕಾರ್ಯವನ್ನು ನಮ್ಮ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಗದ ವ್ಯವಸ್ಥಾಪಕ ನಿರ್ದೇಶಕಿ ರಾಧಾದೇವಿ, ಐಎಫ್‍ಎಸ್ ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್, ಎಡಿಸಿ ಸಾಬೂ ಥಾಮಸ್, ರಾಜ್ಯಪಾಲರ ಉಪ ಕಾರ್ಯದರ್ಶಿ ಯೋಗೇಶ್ ಉಪಾಧ್ಯಾಯ್, ಓಎಸ್ ಡಿ ಶಂಕರ್ ಗುಜರ್ ಸೇರಿದಂತೆ ಇತರರಿದ್ದರು. ಇದನ್ನೂ ಓದಿ: ನಾನು ಕ್ರಿಶ್ಚಿಯನ್; ಧ್ವಜಾರೋಹಣ ಮಾಡಲ್ಲ: ಮುಖ್ಯ ಶಿಕ್ಷಕಿ