– ಖರ್ಚು ಮಾಡಲು ಮನಸ್ಸಾಗಿಲ್ಲ ಎಂದ ಅಜ್ಜಿ
– ಕೂಲಿ ಮಾಡಿ ಏಕಾಂಗಿಯಾಗಿ ವಾಸ
ತಿರುವನಂತಪುರಂ: ಕೊರೊನಾ ವೈರಸ್ ಹೋರಾಟಕ್ಕೆ ಈಗಾಗಲೇ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ 70 ವರ್ಷದ ಅಜ್ಜಿಯೊಬ್ಬರು ಕೂಲಿ ಮಾಡಿ ಉಳಿತಾಯ ಮಾಡಿದ್ದ ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಲಲಿತಮ್ಮ ದೇಣಿಗೆ ನೀಡಿದ ಅಜ್ಜಿ. ಇವರು ಪ್ರತಿವರ್ಷ ತಮ್ಮ ವರ್ಷಪೂರ್ತಿ ಮಾಡಿದ್ದ ಉಳಿತಾಯವನ್ನು ಹತ್ತಿರದ ದೇವಸ್ಥಾನದಲ್ಲಿ ನಡೆಯುವ ಹಬ್ಬಕ್ಕಾಗಿ ದಾನ ಮಾಡುತ್ತಿದ್ದರು. ಇವರಿಗೆ ಮಾಸಿಕ 1,200 ರೂ. ಪಿಂಚಣಿ ಬರುತ್ತದೆ. ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಬರುವ ವೇತನದಿಂದ ಸ್ವಲ್ಪ ಉಳಿತಾಯ ಮಾಡಿದ್ದರು.
Advertisement
Advertisement
ಕೊರೊನಾದಿಂದ ಈ ವರ್ಷ ದೇವಾಲಯ ಉತ್ಸವ ನಡೆಯಲಿಲ್ಲ. ಹೀಗಾಗಿ ಅವರು ತಮ್ಮ ಉಳಿತಾಯದ ಹಣವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಿದರು. 70 ವರ್ಷದ ಲಲಿತಮ್ಮ ಕೊಲ್ಲಂ ಜಿಲ್ಲೆಯ ಅರಿನಲ್ಲೂರ್ ನಲ್ಲಿರುವ ಒಂದು ಶೆಡ್‍ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಲಲಿತಮ್ಮ 2009 ರವರೆಗೆ ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
Advertisement
ಇದು ನನ್ನ ಕಳೆದ ಒಂದು ವರ್ಷದ ಉಳಿತಾಯ. ಆದರೆ ನನ್ನ ಸ್ವಂತ ಬಳಕೆಗಾಗಿ ಹಣವನ್ನು ಖರ್ಚು ಮಾಡಬೇಕು ಎಂದು ನನಗೆ ಅನಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಕೊರೊನಾ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಹೀಗಾಗಿ ನಾನು ಅದೇ ಹಣವನ್ನು ದೇಣಿಗೆಯಾಗಿ ನೀಡಿದ್ದೇನೆ. ಮೊದಲಿಗೆ ನಾನು ಈ ಹಣವನ್ನು ಹೇಗೆ ಪರಿಹಾರ ನಿಧಿಗೆ ನೀಡುವುದು ಎಂದು ಯೋಚಿಸಿದೆ. ನಮ್ಮ ಮನೆಯ ಜಂಕ್ಷನ್‍ನಲ್ಲಿ ಪ್ರತಿದಿನ ಪೊಲೀಸ್ ವಾಹನ ಹೋಗುತ್ತದೆ. ಒಂದು ದಿನ ಆ ವಾಹನವನ್ನು ನಿಲ್ಲಿಸಿ, ಪೊಲೀಸ್ ಅಧಿಕಾರಿಗೆ ನಾನು ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಬೇಕು ಎಂದು ಕೇಳಿದೆ. ಅವರು ನಿಮ್ಮ ಬಳಿಗೆ ಅಧಿಕಾರಿಗಳು ಬರುವುದಾಗಿ ಹೇಳಿ ಹೋದರು.
Advertisement
ಎರಡು ದಿನಗಳ ನಂತರ ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಕುಮಾರ್ ಮತ್ತು ಅವರ ಸಹೋದ್ಯೋಗಿಗಳು ಹಣವನ್ನು ಪಡೆದುಕೊಂಡರು ಎಂದು ತಿಳಿಸಿದ್ದಾರೆ. ಲಲಿತಮ್ಮ ವರ್ಷ ಪೂರ್ತಿ ಉಳಿಸಿದ್ದ 5,101 ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ನನ್ನ ಮಗಳು ಮತ್ತು ಮಗ ಮದುವೆಯಾಗಿ ಹತ್ತಿರದಲ್ಲೇ ವಾಸಿಸುತ್ತಿದ್ದಾರೆ. ಆದರೆ ನಾನು ಯಾರನ್ನೂ ಅವಲಂಬಿಸದೆ ಏಕಾಂಗಿಯಾಗಿ ಬದುಕಲು ಇಷ್ಟಪಡುತ್ತೇನೆ. ಸದ್ಯಕ್ಕೆ ದೇಶ ಕೊರೊನಾ ವೈರಸ್‍ನಿಂದ ಮುಕ್ತವಾಗಬೇಕು. ಆಗ ದೈನಂದಿನ ಕೂಲಿ ಕಾರ್ಮಿಕರಾಗಿರುವ ನನ್ನಂತ ಜನರು ಮತ್ತೆ ಕೆಲಸಕ್ಕೆ ಹೋಗಬಹುದು ಎಂದು ಲಲಿತಮ್ಮ ಹೇಳಿದರು.