ಬಾಗಲಕೋಟೆ: ಎತ್ತಿನ ಬಂಡಿಗೆ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮದ ಬಳಿ ನಡೆದಿದೆ.
ಸಾವನ್ನಪ್ಪಿದವರನ್ನು ಚಂದ್ರಯ್ಯ ಹಿರೇಮಠ (48), ರತ್ನಮ್ಮ ಹಿರೇಮಠ (40), ಕಾಶಮ್ಮ ಹಿರೇಮಠ (38), ಸಿದ್ದವ್ವ ಹೂಗಾರ (60), ಬಸವ್ವ ಗೊರವರ (60), ಗಂಗವ್ವ ಹೂಗಾರ (36), ವಿಜಯಲಕ್ಷ್ಮಿ ಹಿರೇಮಠ (28) ಎಂದು ಗುರುತಿಸಲಾಗಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿವೆ. ಇನ್ನೂ ಘಟನೆಯಲ್ಲಿ ಗಾಯಗೊಂಡ ಗಂಗಮ್ಮ ಗೌಡರ (45), ಸಾಂಬಸವ್ವ ಮಠ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರೆಲ್ಲರೂ ರಕ್ಕಸಗಿ ಗ್ರಾಮದವರಾಗಿದ್ದು, ಹೊಲದ ಕೆಲಸ ಮುಗಿಸಿಕೊಂಡು ಎತ್ತಿನ ಬಂಡಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ರಸ್ತೆ ಅಪಘಾತದಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್.ಪಿ ರಿಷ್ಯಂತ್ ಹಾಗೂ ಹುನಗುಂದ ತಹಶಿಲ್ದಾರ ಸುಭಾಸ್ ಸಂಪಗಾಂವಿ ಭೇಟಿ ಪರಿಶೀಲನೆ ನಡೆಸಿದ್ದಾರೆ.