ಕೈರೋ: ಈಜಿಪ್ಟ್ (Egypt) ರಾಜಧಾನಿ ಕೈರೋ ಸಮೀಪ ಭಾನುವಾರ 2 ರೈಲುಗಳ ನಡುವೆ ಭೀಕರ ಡಿಕ್ಕಿಯಾಗಿ (Trains Collide) ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಓರ್ವ ಲೊಕೋಪೈಲಟ್ ಕೂಡ ಇದ್ದು, 125 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಿಜಾ ಪ್ರಾಂತ್ಯದ ಅಲ್-ಅಯ್ಯತ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಫಯೂಮ್ ಪ್ರಾಂತ್ಯದತ್ತ ತೆರಳುತ್ತಿದ್ದ ರೈಲು, ಅದೇ ಹಳಿಯಲ್ಲಿ ನಿಂತಿದ್ದ ಕೈರೋ-ಅಸ್ವಾನ್ ರೈಲಿನ ಕೊನೆಯ ಬೋಗಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ರಕ್ಷಣಾ ಕಾರ್ಯಕ್ಕೆ ಧಾವಿಸಿ, ಬೋಗಿಗಳಲ್ಲಿ ಸಿಲುಕಿದ್ದ ಪ್ರಯಾಣಿಕರನ್ನ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳುಗಳಲ್ಲಿ 70ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ.
ಅಪಘಾತದ ಕುರಿತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ತ್ವರಿತ ತನಿಖೆಗೆ ಆದೇಶಿಸಿದ್ದಾರೆ. ರಕ್ಷಣಾ ತಂಡಗಳು ಹಾಗೂ ಕ್ರೇನ್ಗಳನ್ನು ಸ್ಥಳಕ್ಕೆ ರವಾನಿಸಿ, ಹಾನಿಗೊಳಗಾದ ಬೋಗಿಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.
