ಬೀಜಿಂಗ್: ಇಂದು ಮುಂಜಾನೆ ನೇಪಾಳ (Nepal) ಮತ್ತು ಟಿಬೆಟ್ (Tibet) ಗಡಿಯಲ್ಲಿ 7.1 ತೀವ್ರತೆಯ ಭಾರೀ ಭೂಕಂಪ (EarthQuake) ಸಂಭವಿಸಿದ್ದು, 95 ಮಂದಿ ಸಾವಿಗೀಡಾಗಿದ್ದು, 130 ಮಂದಿ ಗಾಯಗೊಂಡಿದ್ದಾರೆ.
ಭೂಕಂಪದ ತೀವ್ರತೆಗೆ ಚೀನಾ, ನೇಪಾಳ, ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪವು ಭಾರತೀಯ ಕಾಲಮಾನ ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ ಮತ್ತು ಟಿಬೆಟ್‌ನ ಕ್ಸಿಜಾಂಗ್ ಅದರ ಕೇಂದ್ರಬಿಂದುವಾಗಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ.
ದೆಹಲಿ-ಎನ್‌ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪದ ಅನುಭವವಾಗಿದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ, ಬಲವಾದ ಕಂಪನದ ನಂತರ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಹೋಗಿದ್ದಾರೆ. ಟಿಬೆಟ್‌ನ ಗಡಿಯಲ್ಲಿರುವ ಏಳು ಗುಡ್ಡಗಾಡು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.