– ಪ್ರೊ. ಕಿರಿಕ್‍ಗೆ ಬೇಸತ್ತು ಸುಪಾರಿ ಕೊಟ್ಟಿದ್ದ ವಿಶ್ವನಾಥ್ ಭಟ್
– ಸೆ.20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಕೊಲೆ
ಮೈಸೂರು: ಒಂದು ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದ ನಿಗೂಢ ಕೊಲೆ ರಹಸ್ಯ ಬಯಲಾಗಿದೆ. ಸುಪಾರಿ ಹಂತಕರ ಹೆಡೆಮುರಿ ಕಟ್ಟುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಯಾಂಡಲ್‍ವುಡ್ ಖ್ಯಾತ ಹಿನ್ನಲೆ ಗಾಯಕಿ ಅನನ್ಯಭಟ್ ತಂದೆ ವಿಶ್ವನಾಥ್ ಭಟ್ ಕೊಲೆಯ ಕಿಂಗ್ ಪಿನ್ ಆಗಿದ್ದಾನೆ. ತನ್ನ ವ್ಯವಹಾರಕ್ಕೆ ಅಡ್ಡಿಯಾದ ವ್ಯಕ್ತಿಯ ಕೊಲೆಗೆ 7 ಲಕ್ಷ ಸುಪಾರಿ ಕೊಟ್ಟ ಅನನ್ಯ ಭಟ್ ತಂದೆ ಇದೀಗ ಪೊಲೀಸರ ಅತಿಥಿ.
ಸೆಪ್ಟೆಂಬರ್ 20 ರಂದು ಮೈಸೂರಿನ ನಿವೇದಿತ ನಗರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪರಶಿವಮೂರ್ತಿ ಅವರ ಭೀಕರ ಹತ್ಯೆ ನಡೆದಿತ್ತು. ಈ ಪ್ರಕರಣವನ್ನು ಮೈಸೂರಿನ ಸರಸ್ವತಿ ಪುರಂ ಪೊಲೀಸರು ಭೇದಿಸಿದ್ದು, ವಿಶ್ವನಾಥ್ ಸೇರಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ. ಸುಪಾರಿ ಹಂತಕ ನಾಗೇಶ್, ಸುಪಾರಿ ಹಂತಕನಿಗೆ ಸಹಕರಿಸಿದ ನಿರಂಜನ್, ವಿಶ್ವನಾಥ್ ಸ್ಕೆಚ್‍ಗೆ ಸಹಕರಿಸಿದ ಶಿಕ್ಷಕರಾದ ಸಿದ್ದರಾಜು ಹಾಗೂ ಪರಶಿವ ಬಂಧಿತ ಆರೋಪಿಗಳು.
ಕೊಲೆ ಮಾಡಿಸಿದ್ದು ಯಾಕೆ?
ಎನ್.ಆರ್.ಮೊಹಲ್ಲಾದಲ್ಲಿರುವ ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರಾಗಿದ್ದ ವಿಶ್ವನಾಥ್‍ಗೆ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ ಸಾಕಷ್ಟು ಕಿರುಕುಳ ಕೊಡುತ್ತಿದ್ದರು. ಪ್ರತಿ ತಿಂಗಳ ವೇತನದಲ್ಲಿ ಹಾಗೂ ಸರ್ಕಾರದಿಂದ ಬರುವ ಅನುದಾನದಲ್ಲಿ ಪಾಲುಕೊಡುವುದು ಸೇರಿದಂತೆ ಕೆಲವು ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಆರಂಭವಾಗಿತ್ತು.
ಪರಶಿವಮೂರ್ತಿಯನ್ನ ಮುಗಿಸಿದರೆ ತೊಂದರೆ ತಪ್ಪುತ್ತದೆ ಎಂದು ನಿರ್ಧರಿಸಿದ ವಿಶ್ವನಾಥ್ ಸಹ ಶಿಕ್ಷಕರಾದ ಪರಶಿವ ಜೊತೆ ಸಮಾಲೋಚಿಸಿ ಕೊಲೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾನೆ. ಇಬ್ಬರು ಸಮಾಲೋಚನೆ ನಡೆಸಿ ಮತ್ತೊಂದು ಸಂಸ್ಕೃತ ಪಾಠಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದ ಸಿದ್ದರಾಜು ಜೊತೆ ಈ ವಿಚಾರವನ್ನು ಚರ್ಚಿಸಿದ್ದಾರೆ.
ಮೂವರು ಸೇರಿ ತೀರ್ಮಾನಕ್ಕೆ ಬಂದು ಕೊಲೆಗೆ ಸಂಚು ರೂಪಿಸಿ, ಮೈಸೂರು ತಾಲೂಕಿನ ಭೂಗತಹಳ್ಳಿ ನಿವಾಸಿ ನಾಗೇಶ್ ಗೆ ಸುಪಾರಿ ಕೊಟ್ಟಿದ್ದಾರೆ. ಸುಪಾರಿಗೆ ಒಪ್ಪಿಗೆ ಪಡೆದು ಒಂದು ಲಕ್ಷ ಮುಂಗಡ ಪಡೆದ ನಾಗೇಶ್ ತನ್ನ ಸ್ನೇಹಿತ ನಿರಂಜನ್ ಜೊತೆ ಸೇರಿ ಸೆಪ್ಟೆಂಬರ್ 20 ರಂದು ಕೊಲೆ ಮಾಡಿ ಪರಾರಿಯಾಗಿದ್ದ.
ಸಿಕ್ಕಿಬಿದ್ದಿದ್ದು ಹೇಗೆ?
ಕೌಟುಂಬಿಕ ವಿಚಾರದಲ್ಲಿ ಪತ್ನಿಯಿಂದ ಪ್ರತ್ಯೇಕವಾಗಿ ನಿವೇದಿತ ನಗರದಲ್ಲಿ ಒಂಟಿಯಾಗಿ ವಾಸವಿದ್ದ ಪರಶಿವಮೂರ್ತಿ ಸಾಕಷ್ಟು ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಅಲ್ಲದೆ ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಇತ್ತು. ಬಡ್ಡಿ ವ್ಯವಹಾರದಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಕೊಲೆ ಕೇಸ್‍ನ ವಿಚಾರಣೆ ವೇಳೆ ಸಂಸ್ಕೃತ ಶಾಲೆಯ ಹಳೆಯ ಪ್ರಕರಣ ಮುನ್ನೆಲೆಗೆ ಬಂದಿದೆ. ಶಾಲೆಯ ಕೇಸ್ ಆಧರಿಸಿ ಪೊಲೀಸರು ವಿಶ್ವನಾಥ್ ಭಟ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ವಿಶ್ವನಾಥ್ ಭಟ್ ಕೊಲೆ ರಹಸ್ಯವನ್ನು ಹೇಳಿದ್ದಾನೆ.
ಸಂಪರ್ಕ ಕಡಿತ:
ವಿಶ್ವನಾಥ್ ಜೊತೆಗಿನ ಸಂಪರ್ಕವನ್ನ ಗಾಯಕಿ ಅನನ್ಯಭಟ್ ಎರಡು ವರ್ಷಗಳ ಹಿಂದೆಯೇ ಕಡಿದುಕೊಂಡಿದ್ದಾರೆ. ಅನನ್ಯಭಟ್‌ಗೂ ಈ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದ ಬಗ್ಗೆ ಅನನ್ಯ ಭಟ್ ಪ್ರತಿಕ್ರಿಯಿಸಿ, ನನಗೂ ಅಷ್ಟಾಗಿ ಈ ವಿಚಾರದ ಬಗ್ಗೆ ಗೊತ್ತಿಲ್ಲ. ಟೋಟಲ್ ಇನ್ಫಾರ್ಮೆಷನ್ ನನಗೂ ಇಲ್ಲ. ನನಗೂ ಗೊತ್ತಿಲ್ಲ ಏನು ಅಂತ ಎಂದು ತಿಳಿಸಿದ್ದಾರೆ.