ಬೆಂಗಳೂರು: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಜಯಂತೋತ್ಸವ.
ಅಂಬರೀಶ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಅವರ ಸಮಾಧಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಅಲ್ಲದೆ ಇಂದು ಅಂಬರೀಶ್ ಪತ್ನಿ, ನೂತನ ಸಂಸದೆ ಸುಮಲತಾ ಹಾಗೂ ಮಗ ಅಭಿಷೇಕ್ ಅವರು ಅಂಬಿ ಸಮಾಧಿಗೆ ಪೂಜೆ ಮಾಡಲಿದ್ದಾರೆ.
ಇಂದು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುಮಲತಾ ಹಾಗೂ ಅಭಿಷೇಕ್ ಮಂಡ್ಯಕ್ಕೆ ತೆರಳಲಿದ್ದಾರೆ. ಅಂಬಿ ಹುಟ್ಟುಹಬ್ಬಕ್ಕೆ ಇಂದು ಮತ್ತಷ್ಟು ಮೆರಗು ತಂದಿದೆ. ಸದ್ಯ ಸುಮಲತಾ ಅವರು ಸಂಸದರಾಗಿ ಆಯ್ಕೆ ಮಾಡಿದ ಮಂಡ್ಯ ಜನರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಸಾವಿರಾರು ಅಭಿಮಾನಿಗಳು ಬರುವ ಸಾಧ್ಯತೆ ಇದೆ.
ರೆಬೆಲ್ ಸ್ಟಾರ್ ಅಂಬಿ ಹುಟ್ಟಿದ ದಿನವಾಗಿದ್ದು, ಅಂಬಿ ಜಯಂತಿ ಹಾಗೂ ಸ್ವಾಭಿಮಾನಿ ವಿಜಯೋತ್ಸವ ಮಂಡ್ಯದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಂದಿನ ವಿಜಯೋತ್ಸವದ ಜೋಡೆತ್ತು ದರ್ಶನ್ ಮತ್ತು ಯಶ್ ಮೇನ್ ಅಟ್ರ್ಯಾಕ್ಷನ್ ಆಗಲಿದ್ದಾರೆ. ಸುಮಲತಾ ಗೆಲುವಿಗೆ ಸ್ಟಾರ್ ಡಮ್ ಬಿಟ್ಟು ಹಗಲಿರುಳು ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಅಂಬಿ ಪುತ್ರ ಅಭಿಷೇಕ್ ಸೇರಿ ಹಲವರು ಸುಮಲತಾಗೆ ವಿಜಯ ಯಾತ್ರೆಯಲ್ಲಿ ಸಾಥ್ ನೀಡಲಿದ್ದಾರೆ.
ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಬೇಸರಗೊಂಡಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಎಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂಬರೀಶ್ ನಿಧನರಾಗಿದ್ದರು.