– ಸರ್ಕಾರ ಕೆಡವಲು 5,000 ಕೋಟಿ ಖರ್ಚು ಮಾಡ್ತಾರೆ ಅಂದ್ರೆ ನಂಬ್ತಾರಾ?
ಮಂಡ್ಯ: ಸರ್ಕಾರದ 67 ಕೋಟಿ ಹಣವನ್ನು ಸಿಎಂ ಸಿದ್ದರಾಮಯ್ಯ (Siddaramaiah) ಲೂಟಿ ಮಾಡಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಲಪಟಾಯಿಸಿದ್ದಾರೆ. ಈಗ ದಾಖಲೆಗಳಿಗೆ ಟಾರ್ಚ್ ಬಿಟ್ಟು ನೋಡ್ತಿದ್ದಾರೆ. ಈ ಪರಿಸ್ಥಿತಿ ಅವರಿಗೆ ಬೇಕಿತ್ತಾ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಬಾಂಬ್ ಸಿಡಿಸಿದ್ದಾರೆ.
- Advertisement -
ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ತಪ್ಪಿನ ಅರಿವಿಲ್ಲ. ಆ ಜಾಗ ಅವರ ಪತ್ನಿ, ಬಾಮೈದನಾದ್ದಾ? ಮೊದಲು ಯಾರದ್ದು ಎಂದು ಹೇಳಲಿ. ಮೊದಲು ವೈಟ್ನರ್ ಹಚ್ಚಲಾಯಿತು. ಇವತ್ತು ನೋಡಿದರೆ, ಅದಕ್ಕೆ ಟಾರ್ಚ್ ಬಿಟ್ಟು ತೋರಿಸುವ ವ್ಯರ್ಥ ಪ್ರಯತ್ನ ನಡೆಸಲಾಯಿತು ಎಂದು ಕಟುವಾಗಿ ಟೀಕಿಸಿದ್ದಾರೆ.
- Advertisement -
ನೂರು ಕೋಟಿಗೆ ಎಷ್ಟು ಸಂಖ್ಯೆ ಇದೆ ಅಂತ ಗೊತ್ತಿದ್ಯಾ?
ಇನ್ನೂ ರಾಜ್ಯದಲ್ಲಿ ಆಪರೇಶನ್ ಕಮಲ ಆರಂಭವಾಗಿದೆ. ಕಾಂಗ್ರೆಸ್ (Congress) ಶಾಸಕರಿಗೆ ತಲಾ 100 ಕೋಟಿ ರೂ. ಆಫರ್ ಮಾಡಲಾಗಿದೆ ಎಂದು ಶಾಸಕ ಗಣಿಗ ರವಿ ಹೇಳಿಕೆ ವಿಚಾರವಾಗಿ, ನೂರು ಕೋಟಿಗೆ ಎಷ್ಟು ಸಂಖ್ಯೆ ಇದೆ ಎಂದು ಗೊತ್ತಿದೆಯಾ ಅವರಿಗೆ? ಸರ್ಕಾರ ತೆಗೆಯುವುದಕ್ಕೆ 5,000 ಕೋಟಿ ರೂ. ಖರ್ಚು ಮಾಡುತ್ತಾರೆ ಎಂದರೆ ಯಾರಾದರೂ ನಂಬುತ್ತಾರೆಯೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
- Advertisement -
- Advertisement -
ಕುಮಾರಸ್ವಾಮಿ ಭಜನೆ ಮಾಡದಿದ್ದರೆ ಕಾಂಗ್ರೆಸ್‍ನವರದ್ದು ಏನೂ ನಡೆಯಲ್ಲ. ಸರ್ಕಾರ ಬೀಳುತ್ತೆ ಎಂದು ಅವರೇ ದಿನವೂ ಹೇಳುತ್ತಿದ್ದಾರೆ. ಅವರ ಸರ್ಕಾರ ಸ್ಥಿರತೆ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಅವರಿಗೆ ಅಭದ್ರತೆಯ ಭಾವನೆ ಕಾಡುತ್ತಿದೆ ಎಂದಿದ್ದಾರೆ.
ನನ್ನ ಮೇಲೆ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಇಟ್ಟುಕೊಂಡು ಏನೇನು ನಡೆಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನಾನೂ ಸಿದ್ಧನಿದ್ದೇನೆ, ಏನು ಬೇಕಾದರೂ ಮಾಡಲಿ. ನಾನು ಜೈಲಿಗೆ ಹೋಗುವಂತದ್ದು ಏನು ಮಾಡಿಲ್ಲ, ನೂರು ಜನ್ಮ ಎತ್ತಿ ಬಂದರೂ, ನನ್ನನ್ನು ಏನು ಮಾಡಲು ಆಗಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಕಾರಲ್ಲಿ ಸಿಎಂ ಯಾಕೆ ದಾಖಲೆ ಇಟ್ಟುಕೊಂಡಿದ್ದಾರೆ. ಜನಗಳ ಮುಂದೆ ಎಲ್ಲಾ ದಾಖಲೆಗಳನ್ನು ಇಡಲಿ. ಗಾಜಿನ ಮನೆಯಲ್ಲಿ ಅವರು ಕುಳಿತಿದ್ದಾರೆ. ನಾನು ಜನರ ನಡುವೆ ಇದ್ದೇನೆ. ನಾನೇಕೆ ಭಯಪಡಲಿ. ಸಾಯಿ ವೆಂಕಟೇಶ್ವರ ಪ್ರಕರಣ ಯಾವತ್ತೊ ಸತ್ತಿದೆ. ನನ್ನ ಪಾತ್ರ ಏನಿದೆ ಎಲ್ಲರಿಗೂ ಗೊತ್ತಿದೆ. ಇದನ್ನು ಇಟ್ಕೊಂಡು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಕಣದಲ್ಲಿ ಇರುತ್ತಾರೆ. ಬಿಜೆಪಿ ವರಿಷ್ಠರು, ರಾಜ್ಯ ನಾಯಕರು ಮತ್ತು ನಾವೆಲ್ಲ ಚರ್ಚೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ನಾನು ಚುನಾವಣೆ ಗೆಲ್ಲಲು ಏನು ತೀರ್ಮಾನ ಮಾಡಬೇಕೋ ಅದನ್ನು ಮಾಡುತ್ತೇನೆ. ಜೆಡಿಎಸ್‍ನಲ್ಲೂ ಸಮರ್ಥ ಕಾರ್ಯಕರ್ತರಿದ್ದಾರೆ. ಅಭ್ಯರ್ಥಿ ವಿಷಯದ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ಚನ್ನಪಟ್ಟಣದಲ್ಲಿ ಎನ್‍ಡಿಎ ಅಭ್ಯರ್ಥಿ ಕಣದಲ್ಲಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.