ಮನೆಯಂಗಳಕ್ಕೆ ಬಂದ ಹಾವು ಹಿಡಿದು ರಕ್ಷಿಸಿದ ಆರರ ಪೋರಿ

Public TV
1 Min Read
MADIKERI GIRL

ಮಡಿಕೇರಿ: ಮನೆಯಂಗಳಕ್ಕೆ ಬಂದ ಹಾವನ್ನು ಆರು ವರ್ಷದ ಬಾಲಕಿಯೊಬ್ಬಳು ಹಿಡಿದು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿರುವ ಘಟನೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದಲ್ಲಿ ನಡೆದಿದೆ.

MADIKERI GIRL 2

ವೀರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದ ರೋಷನ್ ಎಂಬವರ ಆರು ವರ್ಷದ ಮಗಳು ತನುಷಾ(6) ಹಾವನ್ನು ಹಿಡಿದು ರಕ್ಷಿಸಿದ ಪೋರಿ. ತನ್ನ ಎರಡು ವರ್ಷದ ತಂಗಿಯೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಹಾವೊಂದು ಬಂದಿದೆ. ಅದು ಮನೆಯ ಸಮೀಪದಲ್ಲೇ ಇರುವ ಪೊದೆಯೊಳಕ್ಕೆ ಹೋಗುತ್ತಿದ್ದನ್ನು ತನುಷಾ ನೋಡಿದ್ದಾಳೆ. ಕೂಡಲೇ ಮನೆಯೊಳಗಿದ್ದ ಅಮ್ಮನನ್ನು ಕೂಗಿ ಕರೆದು ಅಮ್ಮ ಹಾವು ಬಂದಿದೆ ಎಂದು ಹೇಳಿದ್ದಾಳೆ. ತಾಯಿ ಪವಿತ್ರಾ, ಮನೆಯಿಂದ ಹೊರ ಬರುವಷ್ಟರಲ್ಲಿ ಆ ಬಾಲಕಿ ಪೊದೆಯೊಳಕ್ಕೆ ಹೋಗುತ್ತಿದ್ದ ಹಾವನ್ನು ಹಿಡಿದು ಮನೆ ಮುಂದಿರುವ ಕಾಫಿ ಕಣಕ್ಕೆ ತಂದಿದ್ದಾಳೆ. ತನುಷಾ ಹಾವು ಹಿಡಿದು ತಂದಿರುವುದನ್ನು ಪವಿತ್ರಾ ಮತ್ತು ಅಕ್ಕಪಕ್ಕದ ಮನೆಯವರೆಲ್ಲರೂ ನೋಡಿ ಹೌಹಾರಿದ್ದಾರೆ. ಆದರೆ ಬಾಲಕಿ ತನುಷಾ ಮಾತ್ರ ಯಾವ ಅಂಜಿಕೆಯೂ ಇಲ್ಲದೆ ಹಾವು ಹಿಡಿದು ತನಗೆ ಇಷ್ಟ ಬಂದಂತೆ ಹಾವನ್ನು ಎರಡೂ ಕೈಗಳಲ್ಲಿ ಎತ್ತಿ ಆಟವಾಡಿಸಿದ್ದಾಳೆ. ಇದನ್ನೂ ಓದಿ: ಜಾಮದಾರನನ್ನು ಮೊದಲು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು: ಶಾಮನೂರು

snake 1 copy

ಈ ಬಾಲಕಿಯ ತಂದೆ ರೋಷನ್ ಎಂಬವರು ಹಾವುಗಳ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ತಂದೆ ಹಾವನ್ನು ಹಿಡಿಯುವುದನ್ನು ಕಂಡಿರುವ ತನುಷಾ ಕೂಡ ಹಾವನ್ನು ಹಿಡಿದಿದ್ದಾಳೆ ಎನ್ನುತ್ತಾರೆ ಮನೆಯ ಅಕ್ಕ ಪಕ್ಕದವರು. ತನುಷಾಳ ತಾಯಿ ಮನೆಯಿಂದ ಹೊರ ಹೋಗಿದ್ದ ರೋಷನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಬಂದ ರೋಷನ್ ಮಗುವಿನ ಕೈಯಿಂದ ಹಾವನ್ನು ಪಡೆದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 983 ಮಂದಿಗೆ ಕೊರೊನಾ – 21 ಜನ ಸಾವು

Share This Article
Leave a Comment

Leave a Reply

Your email address will not be published. Required fields are marked *