ಬೆಳಗಾವಿ: ಅಥಣಿ ತಾಲೂಕಿನ ಝುಂಜರವಾಡದಲ್ಲಿ ಶನಿವಾರ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ 6 ವರ್ಷದ ಕಾವೇರಿ ಮಾದರ ಮೃತಪಟ್ಟಿದ್ದಾಳೆ.
ಶನಿವಾರ ಸಂಜೆ ಕಾವೇರಿ ಕೊಳವೆ ಬಾವಿಯಲ್ಲಿ ಬಿದ್ದಿದ್ದಳು. 27 ಅಡಿ ಆಳದಲ್ಲಿ ಕಾವೇರಿಯ ಕೈಗಳು ಕ್ಯಾಮೆರಾಗೆ ಕಾಣಿಸಿದ್ದವು. ಹುಕ್ ಮೂಲಕ ಬಾಲಕಿಯನ್ನು ಐದಾರು ಬಾರಿ ಮೇಲೆತ್ತುವ ಪ್ರಯತ್ನ ಮಾಡಿದ್ರೂ ಯಶಸ್ವಿಯಾಗಲಿಲ್ಲ. ದೊಡ್ಡ ಗಾತ್ರದ ಬಂಡೆಗಳು ಸಿಕ್ಕಿರುವ ಕಾರಣ ಕಾರ್ಯಾಚರಣೆಗೆ ತೊಡಕಾಗಿತ್ತು. ಕೊಳವೆ ಬಾವಿ ಸುತ್ತ 20 ಬೋರ್‍ವೆಲ್ ಕೊರೆದು ಸಕ್ಕಿಂಗ್ ಮಷಿನ್ ಮೂಲಕ ಮಣ್ಣು ತೆಗೆಯುವ ಕಾರ್ಯ ನಡೆದಿತ್ತು.
Advertisement
ಸರ್ಕಾರಕ್ಕೆ ಕಾವೇರಿ ತಾಯಿ ಮನವಿ: ನಮ್ಗೆ ಆಗಿರೋ ಆದ ಪರಿಸ್ಥಿತಿ ಬೇರೆಯವರಿಗೆ ಆಗೋದು ಬೇಡ, ಪರಿಹಾರವೂ ನಮ್ಗೆ ಬೇಡ. ರಾಜ್ಯದಲ್ಲಿ ಇರುವ ಎಲ್ಲಾ ತೆರೆದ ಬೋರ್‍ವೆಲ್‍ಗಳನ್ನ ಮುಚ್ಚಿಸಿ ಅಂತಾ ಕಾವೇರಿ ತಾಯಿ ಸವಿತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ನಮಗೆ ಪರಿಹಾರ ಬೇಡ ಏನೂ ಬೇಡ ಗೋಳಿಟ್ಟಿದ್ದಾರೆ.
Advertisement
`ನನ್ನ ಮಗಳು ಮತ್ತ ತೊಡಿ ಮ್ಯಾಲ ಆಡಬೇಕು. ಹಸದ್ರ ಉಣ್ಣಾಕ್ ಕೇಳಬೇಕು. ನೀರಡಿಕಿ ಆದ್ರ ನಾ ನೀರ್ ಕುಡ್ಸಬೇಕು… ಅಲ್ಲೀಮಟಾ ನಂಗ ಏನೂ ಬ್ಯಾಡ….’ ಎಂದು ತಾಯಿ ಸವಿತಾ ಸತತ ರೋದಿಸಿದ್ದರಿಂದ ಹಲವು ಬಾರಿ ಪ್ರಜ್ಞಾಹೀನರಾಗಿದ್ರು. ತಕ್ಷಣವೇ ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಆಂಬುಲೆನ್ಸ್ ನಲ್ಲಿ ಕರೆದೊಯ್ದು ಚಿಕಿತ್ಸೆ ನೀಡಿ, ಚೇತರಿಸಿಕೊಂಡ ಬಳಿಕ ಕುಟುಂಬದವರ ಬಳಿ ಕಳಿಸಿಕೊಟ್ಟರು. ಹೀಗೆ ಅವರು ಪ್ರಜ್ಞೆ ತಪ್ಪುವುದು, ಚಿಕಿತ್ಸೆ ನೀಡಿ ಕರೆತರುವುದು ಐದಾರು ಬಾರಿ ನಡೆಯಿತು. ರೋಧನದ ನಡುವೆ ತೀವ್ರವಾದ ಬಿಸಿಲು ಇದ್ದುದರಿಂದ ಕಾವೇರಿ ತಾಯಿ ಮತ್ತೆ ಅಸ್ವಸ್ಥರಾಗಿದ್ದು, ಝುಂಜರವಾಡ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸವಿತಾ ಬೆಳಗ್ಗೆ ಹಾಲು ಬ್ರೆಡ್ ಸೇವಿಸಿದ್ದಾರೆ ಅಂತಾ ಕೊಕಟ್ಟನೂರು ಪ್ರಾಥಮಿಕ ಆರೋಗ್ಯಾಧಿಕಾರಿ ಸುಕನ್ಯ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
Advertisement
ಸಾಂತ್ವನ ಹೇಳಲು, ಮನೋಸ್ಥೈರ್ಯ ತುಂಬಲು ಸಂಬಂಧಿಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಕುಟುಂಬದವರ ಬಳಿ ತೆರಳುತ್ತಿದ್ದಂತೆಯೇ ಅವರ ದುಃಖದ ಕಟ್ಟೆಯೊಡೆಯುತ್ತಿತ್ತು. ರೋದನ ಮುಗಿಲು ಮುಟ್ಟುತ್ತಿತ್ತು. ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಸಂಬಂಧಿಕರು, ನೆರೆಹೊರೆಯವರು ಜಾಲಿ ಮರದ ಕೆಳಗೆ ಕುಳಿತು ಒಬ್ಬರನ್ನೊಬ್ಬರು ಸಂತೈಸುತ್ತಿದ್ದರು. ಬಾಲಕಿಯ ಉಳಿವಿಗಾಗಿ ಒಂದೆಡೆ ಪ್ರಾರ್ಥಿಸುತ್ತಿದ್ದರೆ, ಇನ್ನೊಂದೆಡೆ ಕಣ್ಣೀರ ಕೋಡಿ ಹರಿಯುತ್ತಿದ್ದ ದೃಶ್ಯಗಳು ಸೋಮವಾರ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲಿ ಗೋಚರಿಸಿತ್ತು,
Advertisement
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡದಲ್ಲಿ ಕೊಳವೆ ಬಾವಿಗೆ ಬಾಲಕಿ ಬಿದ್ದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಡಿಆರ್‍ಎಫ್ ಸಿಬ್ಬಂದಿ, ಎಂಎಲ್‍ಐಆರ್‍ಸಿ ಸಿಬ್ಬಂದಿಗಳಿಂದ ಕಾರ್ಯಾಚರಣೆ ಶನಿವಾರ ರಾತ್ರಿಯಿಂದಲೇ ನಡೆದಿತ್ತು. ಅವಸರ ಮಾಡಿದ್ರೆ ಬಾಲಕಿ ಕಾವೇರಿ ದೇಹಕ್ಕೆ ತೊಂದರೆಯಾಗುವ ಸಾಧ್ಯತೆಗಳಿರುವ ನಿಟ್ಟಿನಲ್ಲಿ ಈವರೆಗೂ ಸೂಕ್ಷ್ಮವಾಗಿ ಕಾರ್ಯಾಚರಣೆ ಮಾಡಿದ್ದೇವು ಅಂತಾ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹೇಳಿದ್ದಾರೆ.
ಸತತ ಕಾರ್ಯಾಚರಣೆಯ ಬಳಿಕ ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ರಂಧ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದೇವು. ಆದ್ರೆ ಈ ವೇಳೆ ಬಂಡೆ ಕಲ್ಲುಗಳು ಅಡ್ಡಿಪಡಿಸಿದವು. ನಂತ್ರ ಯಂತ್ರೋಪಕರಣಗಳನ್ನು ಬಳಸಿ ರಂಧ್ರ ಕೊರೆಯುವುದಾಗಿ ನಿರ್ಧರಿಸಲಾಯಿತು. ಅಂತೆಯೇ ಕಾರ್ಯಾಚರಣೆ ಕೊನೆ ಹಂತ ತಲುಪಿತು ಅಂತಾ ಎನ್‍ಡಿಆರ್‍ಎಫ್ ಟೀಂನ ಅಧಿಕಾರಿ ಭಜೇಂದರ್ ಪಬ್ಲಿಕ್ ಟಿವಿ ವರದಿಗಾರನ ಜೊತೆ ಮಾತನಾಡುತ್ತಾ ಹೇಳಿದ್ರು.
ಬಾಲಕಿ ಕಾವೇರಿ ಕೊಳವೆ ಬಾವಿಯಲ್ಲಿ ಸಿಲುಕಿ 36 ಗಂಟೆ ನಂತ್ರ ಕೊಳವೆ ಬಾವಿ ಪಕ್ಕದಲ್ಲೇ 25 ಅಡಿ ಆಳದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಯಿತು. ಬಾಲಕಿಯ ಕಾರ್ಯಾಚರಣೆಗೆ 2 ಹಿಟಾಚಿ, 2 ಜೆಸಿಬಿ ಬಳಕೆ ಮಾಡಲಾಗಿದ್ದು, ಇನ್ನು ಸ್ಥಳದಲ್ಲಿ ಅಗ್ನಿಶಾಮಕ ದಳ, ಎನ್‍ಡಿಆರ್‍ಎಫ್, ಎಂಎಲ್‍ಐಆರ್‍ಸಿ ಅಧಿಕಾರಿಗಳು ಹಾಗೂ ಹಟ್ಟಿ ಚಿನ್ನದ ಗಣಿಯ ನುರಿತ ತಜ್ಞರ ತಂಡವು ಕಾರ್ಯಾಚರಣೆ ನಡೆಸಿತ್ತು.
ನಡೆದಿದ್ದೇನು?: ಅಜಿತ್ ಮಾದರ ಮತ್ತು ಸವಿತಾ ದಂಪತಿ ಕೂಲಿ ಅರಸಿ ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿಗೆ ಬಂದಿದ್ದರು. ಸಿಗೆ ಆರಂಭವಾದಾಗಿನಿಂದ ಕೆಲಸ ಸಿಗುವುದೂ ಕಡಿಮೆ ಆಗಿದೆ. ಹೀಗಾಗಿ ಅಜಿತ್ ಮಾದರ ಕೂಲಿ ಹುಡುಕಿಕೊಂಡು, ಸಿಕ್ಕಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅಂತೆಯೇ ಬೆಳಗಾವಿಯಲ್ಲಿ ಬಂದು ಕುಟುಂಬ ನೆಲೆಸಿತ್ತು. ಹೆಂಡತಿ ಸವಿತಾ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು.
ಶನಿವಾರ ಸಂಜೆ ತೋಟದ ವಸತಿಯಲ್ಲಿ ದೊಡ್ಡ ಮಗಳು ಅನ್ನಪೂರ್ಣಾಳನ್ನು ಬಿಟ್ಟು, ಚಿಕ್ಕವರಾದ ಕಾವೇರಿ ಹಾಗೂ ಪವನ್‍ನನ್ನು ಕರೆದುಕೊಂಡು ಕಟ್ಟಿಗೆ ಆಯಲು ಬಂದಿದ್ದರು. ಈ ಹೊತ್ತಿನಲ್ಲಿ ಮಕ್ಕಳಿಬ್ಬರೂ ಹೊಲದ ದಾರಿಯ ಪಕ್ಕದಲ್ಲಿ ಆಡುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಹೊಲವನ್ನು ಗಳೆ ಹೊಡೆದಿದ್ದರಿಂದ ದೊಡ್ಡ ದೊಡ್ಡ ಮಣ್ಣಿನ ಹೆಂಟೆಗಳು ಎದ್ದು ನಿಂತಿದ್ದವು. ಆ ಹೆಂಟೆಗಳ ನಡುವೆಯೇ ತೆರೆದ ಕೊಳವೆ ಬಾವಿ ಇರುವುದು ಮಕ್ಕಳಿಗೆ ತಿಳಿದಿರಲಿಲ್ಲ. ಆಡುತ್ತ ಹೋದ ಕಾವೇರಿ ಕಾಲು ಜಾರಿ ಬಿದ್ದಿದ್ದಳು. ಇದನ್ನು ಕಂಡ ಆಕೆಯ ತಮ್ಮ ಪವನ ಗಾಬರಿಯಿಂದ ಚೀರಿದ್ದ. ಮಗನ ದನಿ ಕೇಳುತ್ತಿದ್ದಂತೆಯೇ ಅಲ್ಲಿಗೆ ಧಾವಿಸಿದ ತಾಯಿಯ ಮುಂದೆ `ಅಕ್ಕ ಇದರಾಗ ಬಿದ್ಲು…’ ಎಂದು ಪವನ್ ಕುಣಿಯೊಂದನ್ನು ತೋರಿಸಿದ್ದಾನೆ. ಕೂಡಲೇ ಮಗಳ ರಕ್ಷಣೆಗೆ ಮುಂದಾದ ಸವಿತಾ, ಹಗ್ಗವೊಂದನ್ನು ಬಿಟ್ಟು ಕಾವೇರಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದ್ದರು.