ನವದೆಹಲಿ: ಹರಿಯಾಣ ಮತ್ತು ಪಂಜಾಬ್‍ನ ಪ್ರತಿಭಟನಾ ನಿರತ ರೈತರು ಮಂಗಳವಾರ ದೆಹಲಿಯತ್ತ ಪ್ರಯಾಣ ಆರಂಭಿಸಲಿದ್ದಾರೆ. ಸುದೀರ್ಘ ಅವಧಿಯ ಪ್ರತಿಭಟನೆಗಾಗಿ ಸುಮಾರು ಆರು ತಿಂಗಳಿಗೆ ಬೇಕಾಗುವಷ್ಟು ದವಸ ಧಾನ್ಯಗಳು ಹಾಗೂ ಇಂಧನವನ್ನು ಸಂಗ್ರಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಖಾತ್ರಿ ಸೇರಿದಂತೆ ಹಲವು ಬೇಡಿಕೆಗಳಿಗೆ ಮಣಿಯುವಂತೆ ಕೇಂದ್ರವನ್ನು ಒತ್ತಾಯಿಸುವ ಉದ್ದೇಶದಿಂದ 200 ಕ್ಕೂ ಹೆಚ್ಚು ರೈತ ಸಂಘಗಳು `ದೆಹಲಿ ಚಲೋ’ (Delhi Chalo) ಮೆರವಣಿಗೆಗಾಗಿ ರಾಷ್ಟ್ರ ರಾಜಧಾನಿಗೆ ತೆರಳುತ್ತಿವೆ. ಪಂಜಾಬ್ ಒಂದರಿಂದಲೇ ರೈತರ ಪ್ರತಿಭಟನೆಗೆ (Farmers Protest) 1,500 ಟ್ರಾಕ್ಟರ್‌ಗಳು ಮತ್ತು 500 ವಾಹನಗಳಲ್ಲಿ ರೈತರು ತೆರಳುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಹರಿಯಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಿಕೊಳ್ಳಲಿದ್ದಾರೆ ಎಂದು ಗುಪ್ತಚರ ಇಲಾಖೆ (Intelligence Report) ಸಹ ಎಚ್ಚರಿಸಿದೆ.
ಇತ್ತೀಚೆಗೆ ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ಸಭೆ ಯಾವುದೇ ನಿರ್ಣಯವಿಲ್ಲದೆ ಮುಕ್ತಾಯಗೊಂಡಿತ್ತು. ಇದಾದ ಬಳಿಕ ರೈತರು, ಪ್ರತಿಭಟನೆಯನ್ನು ಮುಂದುವರೆಸಲು ರೈತರು ನಿರ್ಧರಿಸಿದ್ದರು. ರೈತರ ಪ್ರತಿಭಟನೆಗೆ ಕರೆ ನೀಡುವ ಮುನ್ನ, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‍ಸಿ) ಹಿರಿಯ ನಾಯಕತ್ವ ಮತ್ತು ಕೋರ್ ಕಮಿಟಿ ಕೇರಳ, ಉತ್ತರ ಪ್ರದೇಶ, ಬಿಹಾರ, ಛತ್ತೀಸ್‍ಗಢ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ತಮಿಳುನಾಡುಗಳಿಗೆ ಭೇಟಿ ನೀಡಿ ಆಯಾ ರಾಜ್ಯಗಳ ರೈತರಿಂದ ಬೆಂಬಲವನ್ನು ಕೋರಿತ್ತು.
ರೈತರು ಗುಂಪುಗಳಲ್ಲಿ ಬಂದು ದೆಹಲಿಯ ಸುತ್ತಮುತ್ತಲಿನ ಗುರುದ್ವಾರ, ಧರ್ಮಶಾಲಾಗಳು, ಆಶ್ರಮಗಳು, ಅತಿಥಿ ಗೃಹಗಳಲ್ಲಿ ಅಡಗಿಕೊಂಡು ಕ್ಷಿಪ್ರ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ. ಅಲ್ಲದೇ ಪ್ರಧಾನ ಮಂತ್ರಿ ಭವನ, ಗೃಹ ಸಚಿವರ ಭವನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ವರದಿ ಮಾಡಿದೆ.
ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್‍ಗಳು, ಕಬ್ಬಿಣದ ಮೊಳೆಗಳನ್ನು ರಸ್ತೆಗೆ ಹಾಕಿದ್ದಾರೆ. ಇನ್ನೂ ಈ ವಿಚಾರವಾಗಿ ಬಲಪ್ರಯೋಗ ಅಂತಿಮ ಮಾರ್ಗವಾಗಬೇಕು ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಹೇಳಿದೆ.