ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳು ಮಗು ಸಾವನ್ನಪ್ಪಿರುವ ಘಟನೆ ಪಾಟ್ನಾ- ದೆಹಲಿಯ ಸ್ಪೈಸ್ ಜೆಟ್ ವಿಮಾನದಲ್ಲಿ ನಡೆದಿದೆ.
ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ ಹೆಣ್ಣು ಮಗುವನ್ನು ಚಿಕಿತ್ಸೆಗಾಗಿ ಪಾಟ್ನಾದಿಂದ ದೆಹಲಿಗೆ ಕರೆದೊಯ್ಯುತ್ತಿದ್ದಾಗ ಇನ್ನೇನು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವುದಕ್ಕೂ ಮುನ್ನ ಮಗು ಮೃತಪಟ್ಟಿದೆ.
Advertisement
Advertisement
ಸ್ಪೈಸ್ ಜೆಟ್ ವಿಮಾನ-ಎಸ್‍ಜಿ8481 ನಲ್ಲಿ ಈ ಘಟನೆ ನಡೆದಿದ್ದು, ಹೆಣ್ಣು ಮಗು ಮೃತಪಟ್ಟಿರುವ ಕುರಿತು ಮಾಹಿತಿ ಕಲೆ ಹಾಕಿದ್ದೇವೆ ಎಂದು ದೆಹಲಿ ವಿಮಾನ ನಿಲ್ದಾಣದ ಉಪ ಪೊಲೀಸ್ ಆಯುಕ್ತ ಸಂಜಯ್ ಭಟಿಯಾ ತಿಳಿಸಿದ್ದಾರೆ.
Advertisement
ನಮ್ಮ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವಿಚಾರಣೆ ನಡೆಸಿದ್ದು, ಮೃತಪಟ್ಟ ಮಗು ಬಿಹಾರದ ಬೇಗುಸರಾಯ್ ಪಟ್ಟಣದ್ದಾಗಿದೆ. ಹಲವು ದಿನಗಳಿಂದ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ಅಲ್ಲದೆ, ಹೃದಯದಲ್ಲಿ ಸಣ್ಣ ರಂದ್ರ ಇತ್ತು. ಹಿಂದೆಯೂ ದೆಹಲಿಯ ಎಐಐಎಂಎಸ್‍ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮತ್ತೊಮ್ಮೆ ಚಿಕಿತ್ಸೆಗಾಗಿ ಮಗುವನ್ನು ದೆಹಲಿಗೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲದೆ, ಮಗುವಿನ ಜೊತೆಯಲ್ಲೇ ಇದ್ದ ಪೋಷಕರು ಯಾರ ಮೇಲೂ ಆರೋಪ ಹೊರಿಸಿಲ್ಲ ಹಾಗೂ ಅನುಮಾನಿಸಿಲ್ಲ ಎಂದು ಸಂಜಯ್ ಭಟಿಯಾ ತಿಳಿಸಿದ್ದಾರೆ.
Advertisement
ಸ್ಪೈಸ್ ಜೆಟ್ ಆಡಳಿತ ಮಂಡಳಿ ಈ ಕುರಿತು ಪ್ರತಿಕ್ರಿಯೆ ನೀಡಿ, ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ವೈದ್ಯಕೀಯ ಸೌಲಭ್ಯವಿರುವುದರಿಂದ ಪಾಟ್ನಾ- ದೆಹಲಿ ವಿಮಾನದ ಸಿಬ್ಬಂದಿ ಆದ್ಯತೆ ಮೇರೆಗೆ ಅಲ್ಲಿಯೇ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿಯೇ ಇದ್ದ ವೈದ್ಯರೂ ಸಹ ಮಗುವನ್ನು ಪರೀಕ್ಷಿಸಿದ್ದಾರೆ. ಅಲ್ಲದೆ, ಆದ್ಯತೆ ಲ್ಯಾಂಡಿಂಗ್‍ಗೆ ಸಹ ಅನುಮೋದನೆ ದೊರೆತಿದ್ದು, ವಿಮಾನ ಸುಕ್ಷಿತವಾಗಿ ಲ್ಯಾಂಡ್ ಆಗಿದೆ. ಪೋಷಕರ ಮನವಿ ಮೇರೆಗೆ ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ಆದರೆ ದುರದೃಷ್ಟವಶಾತ್ ವೈದ್ಯರು ಪರೀಕ್ಷಿಸುವ ಹೊತ್ತಿಗೆ ಮಗು ಮೃತಪಟ್ಟಿತ್ತು ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ. ಪ್ರಯಾಣಕ್ಕೂ ಮುನ್ನ ಪೋಷಕರು ಮಗುವಿನ ಆರೋಗ್ಯದ ಸ್ಥಿತಿಗತಿ ಕುರಿತು ಯಾವುದೇ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗೆ ನೀಡಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.