Connect with us

Latest

ಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ನೂಕುನುಗ್ಗಲು – 6 ಮಂದಿ ಭಕ್ತರು ಸಾವು

Published

on

– ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

ಕೋಲ್ಕತ್ತಾ: ಇಂದು ದೇಶದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಂಭ್ರಮದಿಂದ ಮಾಡಲಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದ ಕಚುವಾ ಲೋಕನಾಥ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ನೂಕುನುಗ್ಗಲಾಗಿ 6 ಮಂದಿ ಭಕ್ತರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.

ಕಚುವಾ ಲೋಕನಾಥ ದೇವಾಲಯದಲ್ಲಿ ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿ ಕೂಡ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲಾಯಿತು. ಹೀಗಾಗಿ ಎಂದಿನಂತೆ ಲಕ್ಷಾಂತರ ಮಂದಿ ಭಕ್ತಾದಿಗಳು ದೇವಾಲಯದಲ್ಲಿ ಸೇರಿದ್ದರು. ಈ ಸಮಯದಲ್ಲಿ ಭಾರೀ ಮಳೆ ಆರಂಭವಾಗಿತ್ತು. ಗಂಟೆಗಟ್ಟಲೇ ಎಡಬಿಡದೆ ಮಳೆ ಸುರಿಯುತ್ತಿದ್ದ ಕಾರಣ ಭಕ್ತರು ಮಳೆಯಿಂದ ಆಶ್ರಯ ಪಡೆಯಲು ದೇವಾಲಯದ ಅಕ್ಕಪಕ್ಕದಲ್ಲಿದ್ದ ಅಂಗಡಿ, ಮಳಿಗೆ, ಮಂಟಪಗಳ ಕೆಳಗೆ ನಿಂತಿದ್ದರು.

ದೇವಾಲಯದ ಪಕ್ಕದಲ್ಲಿದ್ದ ಬಿದಿರಿನ ಮಂಟಪದ ಕೆಳಗೆ ಭಕ್ತರು ನಿಂತಿದ್ದಾಗ ಭಾರೀ ಮಳೆಗೆ ಅದು ಕುಸಿದು ಬಿದ್ದಿದೆ. ಆ ಸ್ಥಳದಲ್ಲಿ ಹೆಚ್ಚಿನ ಭಕ್ತರು ಇದ್ದ ಕಾರಣಕ್ಕೆ ನೂಕುನುಗ್ಗಲು ಉಂಟಾಗಿ, ಜನರು ಕಕ್ಕಾಬಿಕ್ಕಿ ಓಡಿಹೋಗಿದ್ದಾರೆ. ಕುಸಿದು ಬಿದ್ದ ಮಂಟಪದ ಅಡಿಯಲ್ಲಿ ಸಿಲುಕಿ ಹಲವರು ಗಾಯಗೊಂಡಿದ್ದಾರೆ.

ಜೊತೆಗೆ ಭಕ್ತರು ಮಂಟಪದಿಂದ ದೂರ ಹೋಗಲು ಪ್ರಯತ್ನಿಸಿದಾಗ ಕೆಲವರು ದೇವಾಲಯದ ಕಲ್ಯಾಣಿಯಲ್ಲಿ ಬಿದ್ದಿದ್ದಾರೆ. ನೂಕುನುಗ್ಗಲಾದ ಹಿನ್ನೆಲೆ ಕೆಲವರು ಕೆಳಗೆ ಬಿದ್ದು, ಕಲ್ತುಳಿತಕ್ಕೆ ಒಳಗಾಗಿದ್ದಾರೆ. ಪರಿಣಾಮ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಬರಸಥ್ ಆಸ್ಪತ್ರೆ ಹಾಗೂ ಆರ್.ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಈ ಬಗ್ಗೆ ತಿಳಿದ ಬಳಿಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂ. ಮತ್ತು ಇತರೆ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *