ಬೆಂಗಳೂರು: ಕಳೆದ 2 ದಿನಗಳಿಂದ ಸುರಿಯುತ್ತಿರುವ ದಾಖಲೆ ಮಳೆಗೆ ರಾಜಧಾನಿ ತತ್ತರಿಸಿ ಹೋಗಿದೆ. ಇತ್ತ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲೂಕಿನ ಸುತ್ತಮುತ್ತ ಗುಡುಗು, ಸಿಡಿಲು ಸಮೇತ ಭಾರೀ ಮಳೆಯಾಗಿದೆ. ಈ ವೇಳೆ ಸಿಡಿಲಿಗೆ ಮೂವರು ಮೃತ ಪಟಿದ್ದಾರೆ. ಬಸವಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ಹೊರ ವಲಯದಲ್ಲಿ ಸಿಡಿಲು ಬಡಿದು ವಿಠಲ್ ನಾಟಿಕಾರ್ (28), ಯಲಗೂರಪ್ಪ ಯರಝರಿ (27) ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮೃತರು ಕಾನಾಳ ಗ್ರಾಮದ ವಾಸಿಗಳು ಎಂದು ತಿಳಿದು ಬಂದಿದೆ.
Advertisement
Advertisement
ಮುದ್ದೇಬಿಹಾಳ ತಾಲೂಕಿನ ಹಿರೂರ ಗ್ರಾಮದ ಬಳಿ ಗಿಡದ ಕೆಳಗೆ ಊಟಕ್ಕೆ ಕುಳಿತಿದ್ದ ಮಹಿಳೆ ಮಲ್ಲಮ್ಮ (42) ಸಿಡಿಲಿಗೆ ಮೃತಪಟ್ಟಿದ್ದು, ಈ ವೇಳೆ ಅವರ ಜೇಬಿನಲ್ಲಿದ್ದ ಮೊಬೈಲ್ ಕೂಡ ಸಿಡಿಲಿನ ಹೊಡೆತಕ್ಕೆ ಸ್ಫೋಟಗೊಂಡಿದೆ. ಮಲ್ಲಮ್ಮ ಬಸವನ ಬಾಗೇವಾಡಿ ತಾಲೂಕಿನ ಸಾಸನೂರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
Advertisement
Advertisement
ಕೊಪ್ಪಳದ ಹಲವಾಗಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಸುರೇಶ್ ಹಳ್ಳಿ (35) ಸಾವನ್ನಪ್ಪಿದ್ದು, ಅವರ ಪತ್ನಿ ಕರಿ ಬಸಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಅಲ್ತಾಪ್ ನಾಯ್ಕರ್ (20) ಜಮೀನಿನ ಕೆಲಸಕ್ಕೆ ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ನೂರಜಾನ್ ಕಿಂಡ್ರಿ (40) ಸಾವನ್ನಪ್ಪಿದ್ದಾರೆ. ಭಾರೀ ಮಳೆಗೆ ಬಳ್ಳಾರಿ ಗಡಿ ಭಾಗದ ಹಿರೇಹಳ್ಳದ ಸೇತುವೆ ಮೇಲಿಂದ ಆಂಧ್ರ ಸರ್ಕಾರಿ ಬಸ್ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಸೋಮವಾರ ಸುರಿದ ಮಳೆಯಿಂದ ಚೇತರಿಕೆ ಕಾಣುವ ಹೊತ್ತಿಗೆ ಮತ್ತೆ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಸಿಲ್ಕ್ ಬೋರ್ಡ್, ಎಚ್‍ಎಸ್‍ಆರ್ ಲೇಔಟ್, ಶಾಂತಿನಗರ, ಹೆಬ್ಬಾಳ, ನವರಂಗ್, ರಾಜಾಜಿನಗರ, ಯಲಹಂಕ ನಾಗವಾರ, ಹೆಚ್‍ಬಿಆರ್ ಲೇಔಟ್, ವಿಜಯನಗರ, ಆರ್ ಪಿ ಸಿ ಲೇಔಟ್ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.
ಉಳಿದಂತೆ ಸೋಮವಾರ ರಾತ್ರಿ ಸುರಿದ ಮಳೆಗೆ ನಗರದ ಹುಳಿಮಾವು, ಗೊಟ್ಟಿಗೆರೆ, ಬಸವನಪುರ ಕೆರೆ, ಗುಬ್ಬಲಾಲ ಕೆರೆ, ದೊಡ್ಡಕಲ್ಲಸಂದ್ರ ಕೆರೆ ಸೇರಿ ಒಟ್ಟು 9 ಕೆರೆಗಳು ಉಕ್ಕಿ ಹರಿದಿವೆ. ಪರಿಣಾಮ ಕೆರೆ ಸುತ್ತಮುತ್ತಲ ಮನೆಗಳು ಮತ್ತು ಅಪಾರ್ಟ್‍ಮೆಂಟ್‍ಗಳ ಪಾರ್ಕಿಂಗ್ ಲಾಟ್‍ಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಇತ್ತ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ. ಹೆಬ್ಬಾಳ ಫ್ಲೈಓವರ್ ಮೇಲೆ ಮತ್ತು ಕೆಳಗೆ ನೀರು ತುಂಬಿತ್ತು. ನವರಂಗ್ ಬಳಿ ಪಾದಾಚಾರಿ ಮಾರ್ಗದ ನೆಲಹಾಸು ಕುಸಿದು ವ್ಯಕ್ತಿಯೊಬ್ಬ ಅದರಲ್ಲಿ ಬಿದ್ದಿದ್ದಾನೆ. ಬನ್ನೇರುಘಟ್ಟ ರಸ್ತೆ, ಬಿಳೇಕಹಳ್ಳಿ, ಡಾಲರ್ಸ್ ಲೇಔಟ್‍ನ ಹಲವು ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿ ಬೈಕ್, ಕಾರು ಸೇರಿದಂತೆ ವಾಹನಗಳೆಲ್ಲಾ ಮುಳಗಿದ್ದವು. ನಗರದ ಹಲವೆಡೆ ಮರಗಳು, ವಿದ್ಯುತ್ ಕಂಬ ಬಿದ್ದಿವೆ. ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಆಗುತ್ತೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
* ಮನೋರಾಯನಪಾಳ್ಯ – 58 ಮಿ.ಮೀ
* ನಾಗರಬಾವಿ – 57.5 ಮಿ.ಮೀ
* ಹೆಚ್‍ಆರ್‍ಬಿ ಲೇಔಟ್ – 55.5 ಮಿ.ಮೀ
* ಕೋಣನಕುಂಟೆ – 53ಮಿ.ಮೀ
* ಗಾಳಿ ಆಂಜನೇಯ ದೇವಾಲಯ ರಸ್ತೆ, ನಾಯಂಡಹಳ್ಳಿ – 50 ಮಿ.ಮೀ
* ಮಾರುತಿ ಮಂದಿರ – 50 ಮಿ.ಮೀ
* ಹಂಪಿನಗರ – 50 ಮಿ.ಮೀ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv