ದೆಹಲಿಯಲ್ಲಿನ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

Public TV
1 Min Read
delhi schools bomb threat

ನವದೆಹಲಿ: ದೆಹಲಿಯ ಆರು ಶಾಲೆಗಳಿಗೆ ಶುಕ್ರವಾರ ಮುಂಜಾನೆ ಬಾಂಬ್ ಬೆದರಿಕೆ ಕರೆಗಳು ಬಂದಿದೆ. ಇ-ಮೇಲ್‌ ಮೂಲಕ ಬೆದರಿಕೆ ಕರೆ ಬಂದಿದ್ದು, ವಾರದಲ್ಲಿ ಎರಡನೇ ಪ್ರಕರಣ ದಾಖಲಾಗಿದೆ.

ಡಿ.9 ರಂದು ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ಕನಿಷ್ಠ 44 ಶಾಲೆಗಳು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದ್ದವು. ನಂತರ, ಇದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ನಿರ್ಧರಿಸಿದ್ದರು.

ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಒಂದು ವಾರದೊಳಗೆ ಶಾಲೆಗಳಿಗೆ ಎರಡನೇ ಬಾರಿ ಬಾಂಬ್ ಬೆದರಿಕೆ ಬಂದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಭಟ್ನಾಗರ್ ಇಂಟರ್ನ್ಯಾಷನಲ್ ಸ್ಕೂಲ್, ಪಶ್ಚಿಮ ವಿಹಾರ್ (ನಸುಕಿನ 4:21), ಕೇಂಬ್ರಿಡ್ಜ್ ಶಾಲೆ, ಶ್ರೀ ನಿವಾಸ್ ಪುರಿ (ಬೆಳಗ್ಗೆ 6:23), ಡಿಪಿಎಸ್ ಅಮರ್ ಕಾಲೋನಿ, ಕೈಲಾಶ್ ಪೂರ್ವ (ಬೆಳಗ್ಗೆ 6:35), ದಕ್ಷಿಣ ದೆಹಲಿ ಪಬ್ಲಿಕ್ ಸ್ಕೂಲ್, ಡಿಫೆನ್ಸ್ ಕಾಲೋನಿ (ಬೆಳಗ್ಗೆ 7:57), ದೆಹಲಿ ಪೊಲೀಸ್ ಪಬ್ಲಿಕ್ ಸ್ಕೂಲ್, ಸಫ್ದರ್ಜಂಗ್ (ಬೆಳಗ್ಗೆ 8:02 am), ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್, ರೋಹಿಣಿ (ಬೆಳಗ್ಗೆ 8:30) ಬೆದರಿಕೆ ಇ-ಮೇಲ್‌ಗಳಿಗೆ ಸಂಬಂಧಿಸಿದ ಕರೆಯನ್ನು ಸ್ವೀಕರಿಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿಶಾಮಕ ದಳ, ಪೊಲೀಸರು, ಬಾಂಬ್ ಪತ್ತೆ ದಳ, ಶ್ವಾನ ದಳಗಳು ಶಾಲೆಗಳಿಗೆ ಆಗಮಿಸಿ ತೀವ್ರ ಶೋಧ ನಡೆಸಿವೆ. ಅಧಿಕಾರಿಗಳು ಪೋಷಕರನ್ನು ಎಚ್ಚರಿಸಿದ್ದಾರೆ. ಮಕ್ಕಳನ್ನು ಮನೆಯಲ್ಲಿಯೇ ಇರಿಸಿ ಅಥವಾ ಅವರು ಈಗಾಗಲೇ ಶಾಲೆಗೆ ಬಂದಿದ್ದರೆ ಅವರನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

Share This Article