ಸೂರ್ಯಗ್ರಹಣದ ದಿನದಂದೇ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದರ್ಶನಕ್ಕೆ ಗ್ರಹಣ!

Public TV
2 Min Read
tirupati temple

ತಿರುಪತಿ/ಹೈದರಾಬಾದ್: ತಿಮ್ಮಪ್ಪನ ಸನ್ನಿಧಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣ ಇಂದಿನಿಂದ ಆರಂಭಗೊಳ್ಳಲಿದೆ.

ಪೂಜೆಯ ಭಾಗವಾಗಿ ಇಂದು ರಾತ್ರಿ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ತಿಮ್ಮಪ್ಪನ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದ್ದು, ಭಾನುವಾರ ಬೆಳಗ್ಗೆ 6 ಗಂಟೆಯಿಂದ ಆಗಮಶಾಸ್ತ್ರದ ಪ್ರಕಾರ ಧಾರ್ಮಿಕ ವಿಧಿವಿಧಾನ ಆರಂಭವಾಗಲಿದೆ. ವಿಶೇಷ ಮಹಾಸಂಪ್ರೋಕ್ಷಣೆ ಕಾರ್ಯವನ್ನು ಆಂಧ್ರ, ಕರ್ನಾಟಕ, ತೆಲಂಗಾಣದ 45 ಆಗಮ ಪಂಡಿತರು ನಡೆಸಲಿದ್ದಾರೆ. ಬಳಿಕ ಗುರುವಾರದವರೆಗೂ ತಿಮ್ಮಪ್ಪನ ಪದತಳದಲ್ಲಿ ಅಷ್ಟಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣೆ ಮಾಡಲಾಗುತ್ತದೆ.

Tirupati Balaji Temple 01

ಮಹಾ ಯಾಗಕ್ಕಾಗಿ ತಿರುಮಲದ ಯೋಗಶಾಲೆಯಲ್ಲಿ 28 ಹೋಮ ಗುಂಡಿ ನಿರ್ಮಾಣ ಮಾಡಲಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತುಪ್ಪದ ದೀಪದ ಬೆಳಕಿನಲ್ಲೇ ಹೋಮ ಹವನ ನಡೆಸಲು ತೀರ್ಮಾನ ಮಾಡಲಾಗಿದೆ. ಈ ವೇಳೆ ಭಕ್ತರ ದರ್ಶನಕ್ಕೆ ದೇವಾಲಯದ ಟಿಟಿಡಿ ಸಮಿತಿ ನಿರ್ಬಂಧ ಹೇರಿದೆ. ಟಿಟಿಡಿ ಗುರುವಾರದಿಂದಲೇ ತಿಮ್ಮಪ್ಪನ ದಿವ್ಯ ದರ್ಶನ, ಸರ್ವದರ್ಶನ ಟೋಕನ್ ನೀಡುವುದನ್ನು ರದ್ದು ಮಾಡಿದ್ದು, ಸರತಿ ಸಾಲಿನಲ್ಲಿ ಬರುವ ಭಕ್ತರಿಗೂ ಮಿತಿ ಹೇರಿದೆ.

ಏನಿದು ಬಾಲಾಲಯ ಮಹಾಸಂಪ್ರೋಕ್ಷಣೆ?: ತಿಮ್ಮಪ್ಪನ ಮೂಲವಿರಾಟ್ ಮತ್ತು ಇತರೆ ದೇವರ ವಿಗ್ರಹಗಳ ಶಕ್ತಿಯನ್ನು ಬಿಂಬದಿಂದ ಕುಂಭದೊಳಕ್ಕೆ ಆವಾಹನೆ ಮಾಡುವ ಪ್ರಕ್ರಿಯೆಯಾಗಿದೆ. ಧಾರ್ಮಿಕ ಆಚಾರಣೆಯನ್ನು 12 ವರ್ಷಗಳಿಗೆ ಒಮ್ಮೆ ಮಾತ್ರ ಮಾಡಲಾಗುತ್ತದೆ.

ಅಷ್ಟಬಂಧನ: 8 ರೀತಿಯ ವಸ್ತುಗಳಿಂದ ತಯಾರು ಮಾಡಿದ ಚೂರ್ಣ. ಈ ಚೂರ್ಣದ ಆಯಸ್ಸು 12 ವರ್ಷಗಳ ಕಾಲ ಇರುತ್ತದೆ. ಈ ಅಷ್ಟ ಬಂಧನವನ್ನು ತಿಮ್ಮಪ್ಪನ ಪಾದದಲ್ಲಿ ಇರಿಸುತ್ತಾರೆ. ವಿಶೇಷವಾಗಿ ಮಹಾಸಂಪ್ರೋಕ್ಷಣೆ ವೇಳೆ ದೇಗುಲದ ಸಿಬ್ಬಂದಿಗೂ ರಾಮುಲವಾರಿ ಮೇಡ ದಾಟಲು ಅವಕಾಶ ಇರಲ್ಲ.

tirupati laddu

30 ಸಾವಿರ ಭಕ್ತಿಗೆ ಮಾತ್ರ ಅವಕಾಶ: ದೇವರಿಗೆ ನಡೆಯುವ ಪ್ರಕ್ರಿಯೆ ಬಾಲಾಲಯ ಮಹಾಸಂಪ್ರೋಕ್ಷಣೆ ವಿಶೇಷ ಪೂಜಾ ಕಾರ್ಯದ ದಿನಗಳಲ್ಲಿ ಟಿಟಿಡಿ ಸಮಿತಿ 30 ಸಾವಿರ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಿದೆ. ಆಗಸ್ಟ್ 16 ರ ವರೆಗೂ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ ಎಂದು ಟಿಟಿಡಿ ಸಮಿತಿ ತಿಳಿಸಿದೆ. ಈ ಹಿಂದಿನ ವರ್ಷಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಪ್ರತಿನಿತ್ಯ ಸುಮಾರು 1 ಲಕ್ಷ ಮಂದಿ ದೇವರ ದರ್ಶನ ಪಡೆಯುತ್ತಿದ್ದರು.

ಈ ಹಿಂದೆ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವ 6 ದಿನಗಳ ಅವಧಿಯಲ್ಲಿ ಭಕ್ತರಿಗೆ ದೇವರ ದರ್ಶನ ಕಾರ್ಯ ನೀಡದಿರಲು ಟಿಟಿಡಿ ನಿರ್ಧರಿಸಿತ್ತು. ಆದರೆ ಈ ಬಳಿಕ ನಡೆದ ಚರ್ಚೆಗಳಲ್ಲಿ ಭಕ್ತರಿಂದ ಒತ್ತಡ ಹೆಚ್ಚಾಗಿದ್ದರಿಂದ ಸದ್ಯ 30 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *