ಗುವಾಹಟಿ: ಅಸ್ಸಾಂನಲ್ಲಿ ಸಾರ್ವಜನಿಕವಾಗಿ ಹಸುವನ್ನು ಕೊಂದು ನಂತರ ಅದರ ಮಾಂಸವನ್ನು ತಿಂದ ಪ್ರಕರಣದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬ 19 ವಯಸ್ಸಿನ ಹುಡುಗ ಕೂಡ ಇದ್ದಾನೆ.
ಸಾರ್ವಜನಿಕ ಸ್ಥಳದಲ್ಲೇ ಹಸು ಕೊಂದ ಕೃತ್ಯದ ವೀಡಿಯೋ ವೈರಲ್ ಆಗಿತ್ತು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ತಿಳಿಸಿದ್ದಾರೆ.
ಆರೋಪಿಗಳನ್ನು ಸಾಹಿಲ್ ಖಾನ್ (20), ಹಫೀಜುರ್ ಇಸ್ಲಾಂ (19), ರೋಕಿಬುಲ್ ಹುಸೇನ್ (20), ಸಾಹಿದುಲ್ ಇಸ್ಲಾಂ (30), ಇಜಾಜ್ ಖಾನ್ (26), ಜಹಿದುಲ್ ಇಸ್ಲಾಂ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ರಾಜ್ಯದ ಕಾಮರೂಪ ಜಿಲ್ಲೆಯ ಅಸಲ್ಪಾರ ಗ್ರಾಮದ ನಿವಾಸಿಗಳು.
ವೀಡಿಯೋದಲ್ಲಿ, ಆರೋಪಿಗಳು ದೊಡ್ಡ ಚಾಕುಗಳನ್ನು ಹರಿತಗೊಳಿಸುವುದು, ಅಡುಗೆ ಪಾತ್ರೆಗಳನ್ನು ಹೊತ್ತುಕೊಂಡು ದೋಣಿಗೆ ಹಸುವನ್ನು ಹತ್ತಿಸಿಕೊಳ್ಳುವುದನ್ನು ಕಾಣಬಹುದು. ಆ ವೀಡಿಯೋದ ಇನ್ನೊಂದು ಭಾಗದಲ್ಲಿ, ಅವರು ಪ್ರಾಣಿಯನ್ನು ಕತ್ತರಿಸಿ ನಂತರ ಅಡುಗೆ ಮಾಡುವುದನ್ನು ತೋರಿಸಲಾಗಿದೆ.
ಈ ವೀಡಿಯೋ, ಗೋವುಗಳನ್ನು ಪವಿತ್ರವೆಂದು ಪರಿಗಣಿಸುವ ಹಿಂದೂ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. 2021 ರ ಅಸ್ಸಾಂ ಗೋ ಸಂರಕ್ಷಣಾ ಕಾಯ್ದೆಯಡಿ, ರಾಜ್ಯದಲ್ಲಿ ಅಕ್ರಮ ವಧೆ ಮತ್ತು ಜಾನುವಾರು ವ್ಯಾಪಾರವನ್ನು ನಿಷೇಧಿಸಲಾಗಿದೆ.