ವಿಜಯವಾಡ: ಆಂಧ್ರಪ್ರದೇಶ ವಿಜಯವಾಡ ಜಿಲ್ಲೆಯ ಕೃಷ್ಣಲಂಕಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡಿ ವಿಡಿಯೋವನ್ನು ಪ್ರದರ್ಶಿಸಿದ ಬಳಿಕ ಪೊಲೀಸರು ಈ ಆರು ಯುವಕರನ್ನು ಬಂಧಿಸಿದ್ದಾರೆ.
ಎ ನಿಖಿಲ್(23), ಎಂ.ಮಹೇಶ್(19), ಎ ಶಿವ(20), ಎನ್ ರಘುರಾಮ್(22), ಶ್ರೀನಿವಾಸ್ ಪ್ರವೀಣ್(19) ಮತ್ತು ಎಸ್ ರಂಜೀತ್ ಬಂಧಿತ ಯುವಕರು. ಆರು ಮಂದಿ ಯುವಕರು ಸಹ ಹೈದರಾಬಾದ್ ಮೂಲದವರಾಗಿದ್ದಾರೆ. ಜೂನ್ 10 ರಂದು ಕೆಟಿಎಮ್ ಕಂಪೆನಿ ಆಯೋಜಿಸಿದ್ದ “ಆರೆಂಜ್ ಡೇ” ಕಾರ್ಯಕ್ರಮಕ್ಕಾಗಿ ವಿಜಯವಾಡಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಿಂದ ಹಿಂದಿರುಗುವ ವೇಳೆ ಈ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಯುವಕರು ತಮ್ಮನ್ನು ತಾವು ಅಪಾಯಕ್ಕೆ ತಳ್ಳಿಕೊಂಡಿದ್ದಲ್ಲದೇ ಇತರೆ ಜನರನ್ನು ಸಹ ಅಪಾಯಕ್ಕೆ ತಳ್ಳುತ್ತಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 336 ಮತ್ತು ಮೋಟಾರ್ ವೆಹಿಕಲ್ಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
Advertisement
ಸಿಕ್ಕಿ ಬಿದ್ದಿದ್ದು ಹೇಗೆ: ಬೈಕ್ ವೀಲಿಂಗ್ ಮಾಡಿದ್ದ ದೃಶ್ಯಗಳನ್ನು ಸೆರೆ ಹಿಡಿದಿದ್ದ ಯುವಕರ ಗುಂಪು ತಮ್ಮ ಸಾಹಸವನ್ನು ಕೆಲ ಸಾಮಾಜಿಕ ಜಾಲತಾಣ ಹಾಗೂ ವಾಟ್ಸಪ್ ಗ್ರೂಪ್ ಗಳ್ಲಿ ಹಂಚಿಕೊಂಡಿದ್ದರು.
Advertisement
ಈ ವಿಡಿಯೋದಲ್ಲಿ ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸದ ಯುವಕರು ಬೈಕನ್ನು ವೇಗವಾಗಿ ಚಾಲನೆ ಮಾಡಿ ವೀಲಿಂಗ್ ಮಾಡಿದ್ದಾರೆ. ಅಲ್ಲದೇ ತ್ರಿಬಲ್ ರೈಡಿಂಗ್ ಸಹ ಮಾಡಿರುವ ಯುವಕರು ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರೇ ವಾಹನ ಸವಾರರಿಗೂ ಕಿರಿ ಕಿರಿ ಉಂಟುಮಾಡಿದ್ದಾರೆ.
Advertisement
ಸದ್ಯ ಆರೋಪಿಗಳ ವಿರುದ್ಧ ವಿಜಯವಾಡದ ಕೃಷ್ಣ ಲಂಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ದಕ್ಷಿಣ ವಲಯದ ಎಸಿಪಿ ಕೆ ಶ್ರೀನಿವಾಸ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ ಟ್ರಾಫಿಕ್ ಪೊಲೀಸರು ಕೆಲ ತಿಂಗಳ ಹಿಂದೆ ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಂಡಿದ್ದು, ಹಲವರನ್ನು ವಶಕ್ಕೆ ಪಡೆದು ದೂರು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಘಟನೆಯನ್ನು ಸ್ಮರಿಸಬಹುದಾಗಿದೆ. ಅಲ್ಲದೇ ಕಳೆದ ನಾಲ್ಕು ದಿನಗಳಿಂದ ವಿಜಯವಾಡ ಪೊಲೀಸರು 1,802 ಮಂದಿ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಕೇಸು ದಾಖಲಿಸಿದ್ದಾರೆ. ಇದರಲ್ಲಿ 91 ಜನರಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಪ್ರಸ್ತುತ ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಕಠಿಣ ಕ್ರಮವನ್ನು ಕೈಗೊಂಡಿದ್ದಾರೆ.