6 ತಿಂಗಳ ಒಳಗಡೆ ವಾಟ್ಸಪ್‌ನಲ್ಲಿ ಎಂಬೆಡ್‌ ಆಗಲಿದೆ ಜಿಯೋಮಾರ್ಟ್‌

Public TV
2 Min Read
whatsapp jiomart 1

ಮುಂಬೈ: 6 ತಿಂಗಳ ಒಳಗಡೆ ಜಿಯೋ ಮಾರ್ಟ್‌ ವಾಟ್ಸಪ್‌ನಲ್ಲಿ ಎಂಬೆಡ್‌ ಆಗಲಿದೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಆನ್‌ಲೈನ್‌ ಶಾಪಿಂಗ್‌ ತಾಣಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಕಂಪನಿಗಳಿಗೆ ಸ್ಪರ್ಧೆ ನೀಡಲು ದೇಶದ ನಂಬರ್‌ ಒನ್‌ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಜಿಯೋ ಮಾರ್ಟ್‌ ತೆರೆದಿದ್ದಾರೆ. ಈಗಾಗಲೇ ಜಿಯೋ ಮಾರ್ಟ್‌ ತನ್ನ ಸೇವೆ ಆರಂಭಿಸಿದ್ದು ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ವಾಟ್ಸಪ್‌ನಲ್ಲಿ ಎಂಬೆಡ್‌ ಆಗಲಿದೆ.

ಈಗಾಗಲೇ ರಿಲಯನ್ಸ್‌ ಫ್ರೆಶ್‌, ರಿಲಯನ್ಸ್‌ ಡಿಜಿಟಲ್‌, ರಿಲಯನ್ಸ್‌ ಫುಟ್‌ ಪ್ರಿಂಟ್‌ ಸೇರಿದಂತೆ ವಿವಿಧ ಕಂಪನಿಗಳು ಕೆಲಸ ಮಾಡುತ್ತಿವೆ. ಇವುಗಳನ್ನು ಒಟ್ಟಿಗೆ ಸೇರಿಸಿ ಉದ್ಯಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಿಲಯನ್ಸ್‌ಗೆ ಜಿಯೋ ಮಾರ್ಟ್‌ ಸಹಕಾರಿಯಾಗಲಿದೆ.

jio mart main

ಸದ್ಯ ದೇಶದದಲ್ಲಿ ಅತಿ ದೊಡ್ಡ ಆಫ್‌ಲೈನ್‌ ರಿಟೇಲ್‌ ಅಂಗಡಿಯನ್ನು ರಿಲಯನ್ಸ್‌ ಹೊಂದಿದೆ. ಈಗ 2025ರ ಒಳಗಡೆ ಜಿಯೋಮಾರ್ಟ್‌ಅನ್ನು ದೇಶದ ನಂಬರ್‌ ಒನ್‌ ಆನ್‌ಲೈನ್‌ ಶಾಪಿಂಗ್‌ ತಾಣವನ್ನಾಗಿ ಮಾಡಲು ಮುಕೇಶ್‌ ಅಂಬಾನಿ ಮುಂದಾಗಿದ್ದಾರೆ,

2020ರ ಏಪ್ರಿಲ್‌ 22 ರಂದು ಫೇಸ್‌ಬುಕ್‌ ಜಿಯೋದಲ್ಲಿ 43,354 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಶೇ.9.9ರಷ್ಟು ಪಾಲನ್ನು ಪಡೆದುಕೊಂಡಿತ್ತು.

Jio Mart 1

ಡಿಸೆಂಬರ್‌ನಲ್ಲಿ ನಡೆದ ಫೇಸ್‌ಬುಕ್‌ ಫ್ಯುಯಲ್‌ ಫಾರ್‌ ಇಂಡಿಯಾ 2020 ಕಾರ್ಯಕ್ರಮದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಮತ್ತು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರು ಫೇಸ್‌ಬುಕ್‌, ಜಿಯೋ ಪಾಲುದಾರಿಕೆಯಿಂದ ದೇಶದ ಮೇಲೆ ಆಗಿರುವ ಮತ್ತು ಆಗಲಿರುವ ಪರಿಣಾಮದ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಮಾತನಾಡಿದ ಅಂಬಾನಿ, ಮುಂದಿನ ಎರಡು ಮೂರು ದಶಕದಲ್ಲಿ ಭಾರತ ವಿಶ್ವದ ಟಾಪ್‌ 3 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು.

ಈ ಮೊದಲು ಜಿಯೋ ಮತ್ತು ವಾಟ್ಸಪ್‌ ಕೇವಲ ಸಂವಹನಕ್ಕಾಗಿ ಮಾತ್ರ ಬಳಕೆ ಆಗುತ್ತಿತ್ತು. ಆದರೆ ಈಗ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಮೌಲ್ಯವನ್ನು ನೀಡುವ ವೇದಿಕೆಯಾಗಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್‌ ಇಂಡಿಯಾ ಕಲ್ಪನೆಯಿಂದ ಕಂಪನಿಗಳು ಈಗ ಹೆಚ್ಚು ಹೆಚ್ಚು ಇಂಟರ್‌ನೆಟ್‌ ಆಧಾರಿತ ಸೇವೆ ನೀಡುತ್ತಿವೆ ಎಂದು ತಿಳಿಸಿದ್ದರು.

JIo Mart k

ವಾಟ್ಸಾಪ್ ಭಾರತದಲ್ಲಿ 100 ದಶಲಕ್ಷ ಚಂದದಾರನ್ನು ಹೊಂದಿದ್ದರೆ ಜಿಯೋ 100 ದಶಲಕ್ಷ ಗ್ರಾಹಕರನ್ನು ಹೊಂದಿದೆ. ಇದರರ್ಥ ಜಿಯೋ ಡಿಜಿಟಲ್‌ ಕನೆಕ್ಟಿವಿಟಿ ತಂದರೆ ವಾಟ್ಸಪ್‌ ಡಿಜಿಟಲ್‌ ಇಂಟರಾಕ್ಟಿವಿಟಿ ತಂದಿದೆ. ಜಿಯೋ ಮಾರ್ಟ್‌ ಸಾಟಿಯಿಲ್ಲದ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಅವಕಾಶವನ್ನು ತರುತ್ತದೆ ಎಂದು ಅಂಬಾನಿ ಹೇಳಿದ್ದರು.

ಮಾರ್ಕ್‌ ಜುಕರ್‌ಬರ್ಗ್‌ ಮಾತನಾಡಿ, ನಾವು ಸಣ್ಣ ಉದ್ಯಮಗಳಿಗೆ ಸೇವೆ ಸಲ್ಲಿಸುವ ವ್ಯವಹಾರದಲ್ಲಿದ್ದೇವೆ ಎಂದು ಹೇಳಲು ನಾವು ಇಷ್ಟಪಡುತ್ತೇವೆ. ಭಾರತದ ಸಣ್ಣ ವ್ಯವಹಾರಗಳು ಜಾಗತಿಕ ಚೇತರಿಕೆಯ ಪ್ರಮುಖ ಭಾಗವಾಗಿರುತ್ತವೆ. ಹೀಗಾಗಿ ಅವರಿಗೆ ಸಹಾಯವಾಗಲು ಉತ್ತಮವಾದ ಟೂಲ್‌ಗಳನ್ನು ನಿರ್ಮಿಸುತ್ತೇವೆ. ಈ ಕಾರಣಕ್ಕೆ ನಾವು ಜಿಯೋ ಜೊತೆ ಪಾಲುದಾರಿಕೆ ಬಯಸಿದ್ದೇವೆ. ಇಂದು ಭಾರತದ ನೂರಾರು ಮಿಲಿಯನ್‌ ಮಂದಿಗೆ ಇಂಟರ್‌ನೆಟ್‌ ಸಿಗುವಲ್ಲಿ ಜಿಯೋದ ಪಾತ್ರ ದೊಡ್ಡದು ಎಂದು ಹೇಳಿ ಶ್ಲಾಘಿಸಿದ್ದರು.

mark zuckerberg mukesh ambani facebook fuel jio

ಲಾಕ್‌ಡೌನ್‌ ಮಧ್ಯದಲ್ಲಿ ಜಿಯೋ ಮತ್ತು ಫೇಸ್‌ಬುಕ್‌ ಪಾಲುದಾರಿಕೆ ಹೇಗೆ ನಡೆಯಿತು ಎಂಬುದಕ್ಕೆ ನಮ್ಮದೇ ಒಂದು ಉತ್ತಮ ಉದಾಹರಣೆ. ಈ ಮಾತನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಜಿಯೋ ಮತ್ತು ಫೇಸ್‌ಬುಕ್ ನಡುವಿನ ಸಹಭಾಗಿತ್ವವು ಭಾರತ, ಭಾರತೀಯರು ಮತ್ತು ಸಣ್ಣ ಭಾರತೀಯ ವ್ಯವಹಾರಗಳಿಗೆ ಸಹಾಯವಾಗಲಿದೆ ಎಂದು ಮುಕೇಶ್‌ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *