– 17 ಮಂದಿ ಮಹಿಳೆಯರು ಸೇರಿ 52 ಜನರ ರಕ್ಷಣೆ
– ತೋಟದಿಂದ ಹೊರಕ್ಕೆ ಹೋದರೆ ಬೆತ್ತದಿಂದ ಏಟು
ಹಾಸನ: ಇದು ನಾಗರೀಕ ಸಮಾಜ ತಲೆತಗ್ಗಿಸುವ ಅನಾಗರೀಕ ರೀತಿಯಲ್ಲಿ 52ಮಂದಿ ಕೂಲಿ ಕಾರ್ಮಿಕರನ್ನು ಜೀತಕ್ಕಾಗಿ ಇಟ್ಟುಕೊಂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹಾಸನ ತಾಲೂಕಿನ ಸಾವಂಕನಹಳ್ಳಿಯ ಹೊರವಲಯದಲ್ಲಿರುವ ತೆಂಗಿನ ತೋಟದಲ್ಲಿ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ದಬ್ಬಾಳಿಕೆ ನಡೆಸಲಾಗುತಿತ್ತು. ನಾಲ್ವರು ಪುಟ್ಟ ಮಕ್ಕಳು, 17 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 52 ಮಂದಿಯನ್ನು ಜೀತ ಬಂಧನದಿಂದ ಮುಕ್ತಗೊಳಿಸಲಾಗಿದೆ.
Advertisement
Advertisement
ರಾಜ್ಯದ ವಿವಿಧ ಭಾಗದಲ್ಲಿ ಬಿಕ್ಷೆ ಬೇಡುವವರನ್ನು, ಬೀದಿ ಬದಿಯ ವಾಸಿಗಳನ್ನು ಹೆಚ್ಚಿನ ಕೂಲಿ ಕೊಡುವುದಾಗಿ ನಂಬಿಸುವ ತಂಡವೊಂದನ್ನು ರಚಿಸಿಕೊಂಡಿದ್ದ ಪ್ರಮುಖ ಆರೋಪಿ ಮುನೇಶ್ ಈಗ ತಲೆ ಮರೆಸಿಕೊಂಡಿದ್ದಾನೆ. ರಾಜ್ಯದ ಮತ್ತು ಬೇರೆ ರಾಜ್ಯಗಳಿಂದ ಬಂದ ಬಡ ಕೂಲಿ ಕಾರ್ಮಿಕರು ಮತ್ತು ಬಿಕ್ಷುಕರೇ ಇವರ ಟಾರ್ಗೆಟ್ ಆಗಿದ್ದರು. ಜೀವನಕ್ಕಾಗಿ ಊರೂರು ಅಲೆಯುವರನ್ನು ಹೊಂಚು ಹಾಕಿ ಈ ತೋಟಕ್ಕೆ ಕರೆದುಕೊಂಡು ಬರುತ್ತಿದ್ದರು.
Advertisement
ಟೊಮೆಟೋ ಕೀಳುವ ಕೆಲಸ ತುಂಬಾ ಸುಲಭವಾದ ಕೆಲಸ ಮತ್ತು ಉತ್ತಮ ಸಂಬಳ ಬೇರೆ ಸಿಗುತ್ತೆ ಎನ್ನುವ ಆಸೆಯಿಂದ ಇಲ್ಲಿಗೆ ಬಂದವರು ಮತ್ತೆ ಹೊರಕ್ಕೆ ಹೋಗಲು ಸಾದ್ಯವಾಗುತ್ತಿರಲಿಲ್ಲ. ಪ್ರಾಣಿಗಳಂತೆ ಅವರನ್ನು ಬೇರೆ ತೋಟಗಳಿಗೆ ಕೂಲಿಗೆ ಕರೆದುಕೊಂಡು ಹೋಗಿ ಮತ್ತೆ ಈ ತೋಟಕ್ಕೆ ವಾಪಸ್ ಕರೆದುಕೊಂಡು ಬಂದು ಒಂದು ಕಡೆ ಕೂಡಿಹಾಕಲಾಗುತಿತ್ತು. ಕೆಲವರು ಎರಡು ವರ್ಷಗಳಿಂದ ಇಲ್ಲಿಯೇ ಇದ್ದಾರೆ. ಇನ್ನೂ ಕೆಲವರು ತಮ್ಮ ಪುಟ್ಟ ಮಕ್ಕಳೊಂದಿಗೆ ಇಲ್ಲಿಗೆ ಬಂದು ತಿಂಗಳುಗಳೇ ಕಳೆದಿವೆ. ಸಂಬಳವೂ ಇಲ್ಲ, ಊರಿಗೆ ವಾಪಸ್ ಹೋಗಲು ಸಾಧ್ಯವಾಗದೇ ನರಕಯಾತನೆ ಅನುಭವಿಸುತ್ತಿದ್ದರು.
Advertisement
ತೆಂಗಿನಮರದ ಸೋಗೆ ನಿರ್ಮಿತ ಒಂದೇ ಕೊಠಡಿಯಲ್ಲಿ ಎಲ್ಲಾ ಕಾರ್ಮಿಕರನ್ನು ಕೂಡಿಹಾಕಿ ರಾತ್ರಿಹೊತ್ತು ಕಾವಲು ಕಾಯುತ್ತಿದ್ದರು. ನಿತ್ಯ ಕರ್ಮಗಳಿಗೆ ಸಹ ಹೊರಕ್ಕೆ ಹೋಗುವಂತಿರಲಿಲ್ಲ. ತೋಟ ಬಿಟ್ಟು ಹೊರಕ್ಕೆ ಹೋಗುವಂತಿರಲಿಲ್ಲ. ಯಾರಾದರೂ ಹೊರಕ್ಕೆ ಹೋಗಲು ಪ್ರಯತ್ನಿಸಿದರೆ ಅವರನ್ನು ಬೆತ್ತದ ಕೋಲುಗಳಿಂದ ಹೊಡೆಯಲಾಗುತಿತ್ತು. ಎಲ್ಲ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. ಮುಂಜಾನೆ 5 ಗಂಟೆಯಿಂದ ಅವರನ್ನು ಬೇರೆ ಕಡೆ ಶುಂಠಿ ಬೆಳೆ ಕೀಳಲು ಕರೆದುಕೊಂಡು ರಾತ್ರಿಯವರೆಗೂ ದುಡಿಸಿಕೊಂಡು ಮತ್ತೆ ಇದೇ ತೋಟಕ್ಕೆ ವಾಪಾಸ್ ಕರೆದುಕೊಂಡು ಬಂದು ಕೂಡಿಹಾಕುತ್ತಿದ್ದರು.
ಹಲವು ವರ್ಷಗಳಿಂದ ನಡೆಯುತಿದ್ದ ದುಷ್ಕರ್ಮಿಗಳ ತಂಡದ ಕೃತ್ಯ ಇದೀಗ ಬೆಳಕಿಗೆ ಬಂದಿದ್ದು, ಎಲ್ಲ ನಿರಾಶ್ರಿತರನ್ನು ಅಲ್ಲಿಂದ ಬಂಧಮುಕ್ತಗೊಳಿಸಲಾಗಿದೆ. ಪ್ರಮುಖ ಆರೋಪಿ ಮುನೇಶ್ ಮತ್ತು ಆತನ ಸಹಚರರು ತಲೆ ಮರೆಸಿಕೊಂಡಿದ್ದಾರೆ. ಮುನೇಶ್ ಜಿಲ್ಲೆಯ ಅರಸೀಕೆರೆಯ ನಿವಾಸಿಯಾಗಿದ್ದು, ಸಾವಂಕನಹಳ್ಳಿಯ ಈ ತೋಟವನ್ನು ಭೋಗ್ಯ ಮಾಡಿಕೊಂಡಿದ್ದಾನೆ. ಇದೀಗ ಹಾಸನ ಪೊಲೀಸರು ಈತನ ಪಾಪಿಕೃತ್ಯವನ್ನು ಭೇದಿಸಿ 52 ಮಂದಿ ಅಮಾಯಕರನ್ನು ಜೀತದಿಂದ ಬಂಧಮುಕ್ತಗೊಳಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv