ಮಂಡ್ಯ: ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ(ಕೆಎಆರ್‌ಎಸ್) ಜಲಾಶಯದಿಂದ 50,573 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದ್ದು ಶ್ರೀರಂಗಪಟ್ಟಣದಲ್ಲಿರುವ ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆಯಾಗಿದೆ.
ಪಕ್ಷಿಧಾಮದಲ್ಲಿರುವ 40 ಕ್ಕೂ ಹೆಚ್ಚು ನಡುಗಡ್ಡೆಗಳು ಮುಳುಗಡೆಯಾಗಿವೆ. ನಡುಗಡ್ಡೆಗಳು ಮುಳುಗಡೆಯಾಗಿರುವ ಕಾರಣ ಗೂಡು, ಮೊಟ್ಟೆ, ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪಕ್ಷಿಗಳು ಪರದಾಡುತ್ತಿವೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸಂಪೂರ್ಣ ಬಂದ್ ಮಾಡಲಾಗಿದೆ.
Advertisement
Advertisement
ಕೆಆರ್‌ಎಸ್‍ನಿಂದ ಹೊರಹರಿವು ಹೆಚ್ಚಾಗುತ್ತಿದ್ದಂತೆ, ಶ್ರೀರಂಗಪಟ್ಟಣ ಸುತ್ತಮುತ್ತ ಪ್ರದೇಶಗಳು ಜಲಾವೃತವಾಗಿವೆ. ನಿಮಿಷಾಂಬಾ ದೇವಾಲಯ, ಸ್ನಾನಘಟ್ಟ, ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರಿಗೆ ನದಿಯ ಹತ್ತಿರಕ್ಕೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.
Advertisement
ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು ಇಂದು ಬೆಳಗ್ಗೆ 122.60 ಅಡಿ ನೀರು ಸಂಗ್ರಹವಾಗಿದೆ. 50,467 ಕ್ಯೂಸೆಕ್ ಒಳ ಹರಿವು ಇದ್ದು 50,573 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಗರಿಷ್ಠ 49.452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ 46.434 ಟಿಎಂಸಿ ನೀರು ಸಂಗ್ರಹಗೊಂಡಿದೆ. ಇದನ್ನೂ ಓದಿ: ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ
Advertisement
ಕಳೆದ ವಾರ 10 ಸಾವಿರ ಕಡಿಮೆ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿತ್ತು. ಆದರೆ ಈಗ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ 50 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯಕ್ಕೆ ಬರುತ್ತಿದ್ದು ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಸಾಧಾರಣವಾಗಿ 122 ಅಡಿ ನೀರು ಸಂಗ್ರಹವಾದ ಬಳಿಕ ಎಷ್ಟು ಒಳ ಹರಿವು ಇದೆಯೋ ಅಷ್ಟೇ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ.
ಎರಡು ವರ್ಷಗಳ ಹಿಂದೆ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದ ಕಾರಣ ಇಲ್ಲಿನ 40ಕ್ಕೂ ಹೆಚ್ಚು ನಡುಗಡ್ಡೆಗಳು ಹಾನಿಯಾಗಿದ್ದವು. ಇದಾದ ನಂತರ ಅರಣ್ಯ ಇಲಾಖೆ ಇಲ್ಲಿನ ನಡುಗಡ್ಡೆಗಳನ್ನು ಮತ್ತೆ ನಿರ್ಮಾಣ ಮಾಡಿತ್ತು. ಇದೀಗ ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಕೆಆರ್‌ಎಸ್ ಡ್ಯಾಂನಿಂದ ನೀರು ಹರಿಬಿಟ್ಟರೆ ಮತ್ತೆ ಅದೇ ರೀತಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಕಾವೇರಿ ಕೊಳ್ಳದ ಜನರಿಗೂ ಸಹ ಪ್ರವಾಹದ ಭೀತಿ ಎದುರಾಗಿದ್ದು, ಈಗಾಗಲೇ ಕಾವೇರಿ ನೀರಾವರಿ ನಿಗಮ ಕಾವೇರಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದೆ.