ರಾಯಚೂರು: ಜಿಲ್ಲೆಯಲ್ಲಿ ಕಲಬೆರಿಕೆ ಸಿಎಚ್ ಪೌಡರ್ ದಂಧೆ ಸತತ ಏಳೆಂಟು ವರ್ಷಗಳಿಂದ ಎಗ್ಗಿಲ್ಲದೆ ನಡೆದಿದ್ದು ವರ್ಷದಿಂದ ವರ್ಷಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ರಾಯಚೂರು ನಗರ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ಗಡಿ ಭಾಗದಲ್ಲಿ ಇದುವರಗೆ ಸುಮಾರು 5 ಸಾವಿರ ಜನ ಸಿಎಚ್ ಪೌಡರ್ ಸೇಂದಿ ಕುಡಿದು ಸಾವನ್ನಪ್ಪಿದ್ದಾರೆ. ಈಗಲೂ ಸಾವಿನ ಸರಣಿ ಮುಂದುವರೆದಿದ್ದು, ರಾಯಚೂರು ನಗರದ ಮೈಲಾರನಗರ, ಹರಿಜನವಾಡ, ದೇವರಕಾಲೋನಿ, ರೈಲ್ವೇ ಸ್ಟೇಷನ್ ಪ್ರದೇಶದಲ್ಲಿ ಯಾರ ಭಯವಿಲ್ಲದೆ ಅಕ್ರಮ ಸಿಎಚ್ ಪೌಡರ್ ಮಾರಾಟ ನಡೆದಿದೆ.
Advertisement
ಸಿಎಚ್ ಪೌಡರ್ ಸೇಂದಿ ಕುಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದರೂ, ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗದೆ ದಂಧೆಕೋರರು ಪ್ರಕರಣಗಳನ್ನ ಮುಚ್ಚಿ ಹಾಕುತ್ತಿದ್ದಾರೆ. ಸ್ಲಂ ಪ್ರದೇಶಗಳಲ್ಲೇ ದಂಧೆ ಜೋರಾಗಿರುವುದರಿಂದ ಹಲವಾರು ಕುಟುಂಬಗಳು ಸಿಎಚ್ ಪೌಡರ್ ಹಾವಳಿಯಿಂದ ಮನೆ ಯಜಮಾನನ್ನ ಕಳೆದುಕೊಂಡು ಅನಾಥವಾಗಿವೆ.