ನವದೆಹಲಿ: ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಮತ್ತು ಹಿಂದುಳಿದ ವರ್ಗಗಳ ಹಕ್ಕಿಗೆ ಹೋರಾಡಲು 50 ಮಂದಿ ಐಐಟಿಯ ಹಳೆ ವಿದ್ಯಾರ್ಥಿಗಳು ಕೆಲಸವನ್ನು ತ್ಯಜಿಸಿ ಹೊಸ ಪಕ್ಷವನ್ನು ಕಟ್ಟುತ್ತಿದ್ದಾರೆ.
ಹೊಸದಾಗಿ ಸ್ಥಾಪನೆಯಾಗಲಿರುವ ಪಕ್ಷಕ್ಕೆ ಬಹುಜನ ಆಜಾದ್ ಪಕ್ಷ ಎಂದು ಹೆಸರಿಡಲಾಗಿದ್ದು, ಈಗ ಚುನಾವಣಾ ಆಯೋಗದಿಂದ ಅನುಮತಿಗಾಗಿ ಕಾಯುತ್ತಿದ್ದಾರೆ.
Advertisement
ನಾವು 50 ಸದಸ್ಯರಿದ್ದೇವೆ. ಎಲ್ಲರೂ ವಿವಿಧ ಐಐಟಿಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಬೇರೆ ಬೇರೆ ಕಡೆ ಉದ್ಯೋಗ ಮಾಡುತ್ತಿದ್ದೆವು. ಚುನಾವಣಾ ಆಯೋಗದ ಅನುಮತಿಗೆ ಅರ್ಜಿ ಸಲ್ಲಿಸಿದ್ದೇವೆ. ಸದ್ಯಕ್ಕೆ ಪಕ್ಷದ ಸದಸ್ಯರು ಕೆಳಹಂತದ ಕೆಲಸದಲ್ಲಿ ತೊಡಗಿದ್ದೇವೆ ಎಂದು ತಂಡದ ಮುಖ್ಯಸ್ಥ 2015ರ ದೆಹಲಿ ಐಐಟಿ ಪದವೀಧರ ನವೀನ್ ಕುಮಾರ್ ತಿಳಿಸಿದ್ದಾರೆ.
Advertisement
ಹೊಸ ಕನಸನ್ನು ಹೊಂದಿರುವ ನಾವು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. 2020ರ ಬಿಹಾರ ವಿಧಾನಸಭಾ ಚುನಾವಣೆಯಿಂದ ಆರಂಭಿಸುತ್ತೇವೆ ನಂತರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ ಎಂದು ಹೇಳಿದ್ದಾರೆ.
Advertisement
ತಂಡದ ಸದಸ್ಯರಲ್ಲಿ ಬಹಳಷ್ಟು ಮಂದಿ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಿದ್ದೇವೆ. ಇಲ್ಲಿ ತನಕ ಹಿಂದುಳಿದ ಜನಾಂಗಕ್ಕೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಸರಿಯಾಗಿ ಸರ್ಕಾರದ ಯೋಜನೆಗಳು ತಲುಪಿಲ್ಲ. ನಮ್ಮ ಸಮಾಜದ ಅಭಿವೃದ್ಧಿಗಾಗಿ ನಾವು ಈ ಪಕ್ಷವನ್ನು ಕಟ್ಟಿದ್ದೇವೆ ಎಂದು ತಂಡ ಹೇಳಿದೆ.
Advertisement
ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಶುರು ಮಾಡಿರುವ ತಂಡವು ಡಾ ಬಿ ಆರ್ ಅಂಬೇಡ್ಕರ್, ಸುಭಾಶ್ ಚಂದ್ರ ಬೋಸ್, ಅಬ್ದುಲ್ ಕಲಾಂ ಹಾಗೂ ಇತರರ ಫೋಟೋಗಳನ್ನು ಪೋಸ್ಟರ್ ನಲ್ಲಿ ಹಾಕಿಕೊಂಡಿದೆ.
ಅನುಮತಿ ದೊರೆತ ನಂತರ ಸಣ್ಣ ಸಣ್ಣ ಗುಂಪುಗಳಾಗಿ ಹಿಂದುಳಿದ ಜನಾಂಗದ ಸೇವೆಯಲ್ಲಿ ತೊಡಗಿಕೊಳ್ಳುತ್ತೇವೆ. ನಮ್ಮದು ಯಾವುದೇ ರಾಜಕೀಯ ಪಕ್ಷದ ಅಥವಾ ಸಿದ್ಧಾಂತದ ವಿರೋಧಿ ಪಕ್ಷವಲ್ಲ ಎಂದು ನವೀನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.