ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

Public TV
5 Min Read
SIDDAGANGA SRI 1

ಸಿದ್ದಗಂಗಾ ಶ್ರೀಗಳು ಇವತ್ತು ನಮ್ಮ ಜೊತೆ ಇಲ್ಲದೇ ಇರಬಹುದು. ಆದರೆ ಅವರು ಪ್ರವಚನ, ಭಾಷಣದಲ್ಲಿ ಹೇಳಿದ ವಾಣಿಗಳು ನಮ್ಮ ಜೊತೆಯಲ್ಲಿವೆ. ಹೀಗಾಗಿ ಇಲ್ಲಿ ಅವರು ಹೇಳಿದ 50 ವಾಣಿಗಳನ್ನು ನೀಡಲಾಗಿದೆ.

1. ಮದುವೆ ಸಮಾರಂಭ ಸರಳವಾಗಿ ನಡೆಯಬೇಕು; ಪ್ರೀತಿ ಪ್ರೇಮಗಳ ಆತ್ಮೀಯ ಮಂಗಳ ಕಾರ್ಯಕ್ರಮಗಳಾಗಬೇಕು; ಎರಡು ಮನೆಗಳ ಬೆಳಕಿನ ಹಬ್ಬವಾಗಬೇಕು.
2. ದುಡಿಮೆ ಸತ್ಯಶುದ್ಧವಾಗಿರಬೇಕು; ಪರಹಿತಮುಖಿಯಾಗಿರಬೇಕು.
3. ಮನಸ್ಸು ಪವಿತ್ರವಾದುದು; ಅದನ್ನು ಜೋಪಾನ ಮಾಡುವ ಕರ್ತವ್ಯ ನಮ್ಮದು.
4. ಲೋಕದ ಮನೋಧರ್ಮ ಏಕಮುಖಿಯಾದುದಲ್ಲ, ಬಹುಮುಖಿಯಾದುದು; ಸಂಕೀರ್ಣ ಸ್ವರೂಪ ಅದರದ್ದು.
5. ನಮ್ಮ ಪೂರ್ವಿಕರು ತಮಗಾಗಿ ದುಡಿದು ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೆ ಹೊರತು ಅವುಗಳನ್ನು ಕಟುಕರಿಗೆ ಮಾರುತ್ತಿರಲಿಲ್ಲ; ಮಾನವೀಯತೆ ಅವರ ಜೀವನವಾಗಿತ್ತು.

150401kpn63 copy

6. ‘ಸೇವೆ’ ಪ್ರಚಾರದ ಸರಕಲ್ಲ; ಅದು ಗುಪ್ತಶಕ್ತಿ; ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.
7. ನಮ್ಮ ಹಿಂದಿನ ಪೂಜ್ಯ ಗುರುಗಳು ನಮಗೆ ಕಲಿಸಿದ ಪಾಠವೆಂದರೆ, ಸದಾ ಕ್ರಿಯಾಶೀಲವಾಗಿರುವ ಜೀವನಭಾಗ್ಯ.
8. ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು; ಮಾತು ತಪಸ್ಸು ಎಂಬಂತಿರಬೇಕು.
9. ಆತ್ಮಾವಲೋಕನ ಅರಿವಿನ ಅಭಾವದಿಂದ ಸಮಾಜವಿಂದು ನೈತಿಕತೆಯ ದಿವಾಳಿಯನ್ನನುಭವಿಸುತ್ತಿದೆ.
10. ಮಾನವ ಪ್ರಜ್ಞೆ ಜಾಗೃತವಾಗದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಾಣದು.

11. ಸಹಜ ಪ್ರೀತಿ ಕಲ್ಲನ್ನೂ ಕರಗಿಸುತ್ತದೆ; ಕಟುಕನನ್ನು ಕರುಣಾಮಯನನ್ನಾಗಿಸುತ್ತದೆ.
12. ಜಗತ್ತು ವೇಗವಾಗಿ ಮುಂದುವರಿದಿದೆ. ಆದರೆ ಆ ವೇಗದಲ್ಲಿ ವಿನಯವಿಲ್ಲ, ವಿಚಾರವಿಲ್ಲ, ಮೌಲ್ಯಗಳಿಲ್ಲ.
13. ದುಡಿದೇ ತಿನ್ನುವುದು ಕೂಳು, ಶ್ರಮ ಜೀವನ ಊಟ ಮಾಡುವುದು ಪ್ರಸಾದ.
14. ಕ್ರಮಬದ್ಧ ಜೀವನ ಪ್ರಗತಿಯ ಮೂಲ, ಅಕ್ರಮ ಜೀವನ ವಿನಾಶಕ್ಕೆ ಹಾದಿ.
15. ಧರ್ಮ ತತ್ವಗಳು ಉಳಿಯಬೇಕಾದರೆ ಸ್ತ್ರೀಯರು ಸಂಸ್ಕಾರವಂತರಾಗಬೇಕು, ಸಮಾಜದ ಕಣ್ಣಾಗಬೇಕು.

SIDDAGANGA 1

16. ಧರ್ಮ ಗ್ರಂಥದಲ್ಲಿಲ್ಲ, ಗುಡಿಯಲ್ಲಿಲ್ಲ, ಬದುಕಿನಲ್ಲಿದೆ, ಹೃದಯವಂತಿಕೆಯಲ್ಲಿದೆ.
17. ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ.
18. ಇಂದು ರಾಷ್ಟ್ರಾದ್ಯಂತ ಜನಶಕ್ತಿಯ ಅಪವ್ಯಯವಾಗುತ್ತಿದೆ. ಇದು ಶುಭ ಲಕ್ಷಣವಲ್ಲ.
19. ಜನನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು.
20. ವ್ಯವಸಾಯವೆಂಬುವುದು ಪವಿತ್ರ ವೃತ್ತಿ. ಅನ್ನಬ್ರಹ್ಮನ ಸೃಷ್ಟಿ ಮಾಡುವ ಅನುಪಮ ಉದ್ಯೋಗ.

21. ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ. ಅದು ನೀಡುವ ಸೊಪ್ಪಿನಲ್ಲಿ, ಉಪ್ಪಿನಲ್ಲಿ, ತುಪ್ಪದಲ್ಲಿ ಆ ಶಕ್ತಿ ನಿಕ್ಷೇಪವಾಗಿದೆ.
22. ‘ಕಾಯಕ’ ಲೋಕ ಕಲ್ಯಾಣಕ್ಕೆ ಮಾಡುವ ಪ್ರಾರ್ಥನೆ. ಕೈಯಿಂದ ಮಾಡುವ ಪೂಜೆ.
23. ದೃಷ್ಟಿ ಪವಿತ್ರವಾಗಿರಲಿ, ಭಾವ ಶುದ್ಧವಾಗಿರಲಿ, ಬದುಕು ಭಕ್ತಿಯಿಂದೊಡಗೂಡಿರಲಿ.
24. ಹೆಣ್ಣಿಗೆ ಧಾರ್ಮಿಕ ಸಂಸ್ಕಾರವನ್ನು, ಸ್ವಾತಂತ್ರ್ಯವನ್ನು ಕೊಟ್ಟಿದ್ದು ಶರಣ ಧರ್ಮ.
25. ಮನುಷ್ಯ ಮನುಷ್ಯನಾಗಿ ಬಾಳುವ ಕಲೆಯನ್ನು ಇಂದು ಮರೆಯುತ್ತಿದ್ದಾನೆ.

siddaganga sri chennai 1 copy

26. ಭಗವಂತನನ್ನು ನಂಬಿ ಪ್ರಾರ್ಥಿಸಿದರೆ ಅದರಿಂದ ಬರುವ ಲಾಭ ಅಪಾರವಾದುದು.
27. ಪರಮಾತ್ಮ ಕೊಟ್ಟ ಶ್ರೇಷ್ಠವಾದ ಆಸ್ತಿಯಲ್ಲಿ ಹೆಚ್ಚಿನ ಭರವಸೆಯನ್ನು ತಾಳಬೇಕು.
28. ಆಡಳಿತ ಮಾಡುವವರು ಬಹಳ ಎಚ್ಚರಿಕೆ ಹಾಗೂ ಜಾಣ್ಮೆಯಿಂದ ಇರಬೇಕು. ಹೇಗೆಂದರೆ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ ದೇಶ ಅಧೋಗತಿಗಿಳಿಯುತ್ತದೆ.
29. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ; ಸ್ವಚ್ಛಂದ ಪ್ರವೃತ್ತಿಯಲ್ಲಿ ಅದೊಂದು ಆತ್ಮವಿಕಾಸಕ್ಕೆ ರಕ್ಷೆ.
30. ವ್ಯಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಜಗತ್ತನ್ನು ಬಿಡಬೇಕಾಗಿಲ್ಲ. ಸಂಸಾರ ತೊರೆಯಬೇಕಾಗಿಲ್ಲ, ಕಾಡನ್ನು ಸೇರಬೇಕಾಗಿಲ್ಲ. ತಾನು ಇದ್ದಲ್ಲೇ ಸಾಧನೆ ಮಾಡಿ ಸಿದ್ಧಿಯನ್ನು ಪಡೆಯಬಹುದು. ಸಾಕ್ಷಾತ್ಕಾರವನ್ನು ಹೊಂದಬಹುದು. ಅದು ಹೆಚ್ಚಾಗಿ ಮನಸ್ಸನ್ನೇ ಅವಲಂಬಿಸಿರುತ್ತದೆ.

31. ಆತ್ಮ ಎಂದರೆ ದೇಹವಲ್ಲ ಅಥವಾ ಅವಯವ ಸಮೂಹವಲ್ಲ, ಮನಸ್ಸೂ ಅಲ್ಲ. ಈ ಎಲ್ಲವುಗಳಲ್ಲಿಯೂ ಇರತಕ್ಕ ಚೈತನ್ಯ. ಅದಕ್ಕೆ ನಾಶವಿಲ್ಲ. ಆ ಆತ್ಮವನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ.
32. ದೀನದಲಿತರ ಉದ್ಧಾರದ ಸಲುವಾಗಿ ತಮ್ಮ ಜೀವನವನ್ನೇ ಮುಡುಪಿಡುವ ಪುಣ್ಯಶಾಲಿಯೇ ಮಹಾತ್ಮ.
33. ಜಗತ್ತನ್ನು ಬಿಡದೇ, ಸಂಸಾರವನ್ನು ತೊರೆಯದೆ, ಕಾಡನ್ನು ಸೇರದೇ, ತಾನು ಇದ್ದಲ್ಲಿಯೇ ಸಾಧನೆ ಮಾಡಿ ಸಿದ್ಧಿ ಪಡೆಯುವುದು ಸಾಕ್ಷಾತ್ಕಾರ.
34. ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅಪಚಾರ ಮಾಡದೇ ನಡೆದುಕೊಳ್ಳುವವನೇ ಧೀರ.
35. ಪ್ರಾರ್ಥನೆ ಎಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ; ಆಹಾರ. ಅದನ್ನು ಗಳಿಸುವಾಗ ಏಕಾಗ್ರತೆಯಿರಬೇಕು. ಹೊಟ್ಟಿಗೆ ಹಸಿವಾದಾಗ ಹೇಗೆ ಪ್ರಸಾದ ಸ್ವೀಕರಿಸುತ್ತೇವೆಯೇ ಹಾಗೆಯೇ ಮನಸ್ಸಿನ ಹಸಿವೆಗೆ ಪ್ರಾರ್ಥನೆ ಪ್ರಸಾದವಾಗುತ್ತದೆ.

SIDDAGANGA SRII 1

36. ಪ್ರತಿನಿತ್ಯ ಮಲಗುವ ಮುನ್ನ ನಡೆ ನುಡಿಗಳು ನಡೆಸಿದ ಒಳಿತು ಕೆಡಕುಗಳ ಜಮಾ ಖರ್ಚನ್ನು ಅವಲೋಕಿಸಬೇಕು.
37. ಜ್ಞಾನ ಎನ್ನುವುದು ಬಹಳ ಪವಿತ್ರವಾದುದು. ಶ್ರೇಷ್ಠವಾದುದು. ಅದು ಅಮೂಲ್ಯ ರತ್ನ, ಯಾರು ನಿಜವಾದ ಜ್ಞಾನ ಸಂಪಾದನೆ ಮಾಡುತ್ತಾರೋ ನಿಜವಾದ ಜ್ಞಾನಿಯಾಗುತ್ತಾನೋ ಅವನೇ ನಿಜವಾದ ಶ್ರೀಮಂತ.
38. ಶಿಕ್ಷಕ ಎಲ್ಲಕ್ಕೂ ಮೊದಲು ಚಾರಿತ್ರ್ಯ ಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಅಧ್ಯಯನ ಶೀಲನಾಗಿರಬೇಕು. ಚಲಿಸುವ ಜ್ಞಾನ ಭಂಡಾರವಾಗಿರಬೇಕು.
39. ಯಾರೂ ಸೋಮಾರಿಗಳಾಗಬಾರದು. ಪರಾವಲಂಬನೆಯಂತೂ ಆಗಲೇಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.
40. ಶಿಕ್ಷಣ ಒಂದು ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು. ಬೆವರು ಸುರಿಸದೇ, ಯಾವುದಾದರೂ ಒಂದು ರೀತಿಯ ಕಾಯಕ ಮಾಡದೆ ಫಲ ಅನುಭವಿಸಲು ಯಾರಿಗೂ ಹಕ್ಕಿಲ್ಲ.

SIDDAGANGA SRI 1 1

41. ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೆ ಹೊರತು, ಬಡವರ ರಕ್ತ ಹೀರುವ ಜಿಗಣೆಯಾಗಬಾರದು.
42. ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ, ಆದರಿಂದ ಪ್ರಸಾದ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.
43. ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ.
44. ನಾವು ಒಮ್ಮೊಮ್ಮೆ ಯೋಚಿಸುತ್ತೇವೆ ಶ್ರೀ ಮಠ ಹೇಗೆ ಇಷ್ಟು ದೊಡ್ಡದಾಗಿ ಬೆಳೆಯಿತು ಎಂದು, ಆಗ ಇದು ಗುರುಗಳ ಶ್ರೀ ರಕ್ಷೆ ಹಾಗು ‘ಶಿವಯೋಗಿಯ ದೇಹ’ ವೃಥಾ ಸವೆಯದಂತೆ ಭಕ್ತರು ನಡೆಸಿಕೊಂಡಿದ್ದರ ಪರಿ ಎನಿಸುತ್ತಿರುತ್ತದೆ.
45. ಪ್ರಪಂಚದಲ್ಲಿ ಧರ್ಮ ಯಾವುದು ಎಂದರೆ ಒಂದೇ ಧರ್ಮ, ಅದು ಮನುಷ್ಯ ಧರ್ಮ. ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರಾವಾಗುವುದು ಧರ್ಮವೇ ಪರಂತು ಧರ್ಮ ಗುಡಿ ಗುಂಡಾರಗಳಲ್ಲಿ ನೆಲೆಸಿಲ್ಲ.

150331kpn55

46. ಸಾಧಕನೊಬ್ಬನಿಗೆ ಸನ್ಮಾನವೆಂದರೆ ಅವನನ್ನು ಸಭೆಗೆ ಕರೆದು ಶಾಲು, ಪೇಟಾ ತೊಡಿಸಿ ಫಲ ಪುಷ್ಪಗಳನ್ನಿತ್ತರೆ ಅದು ಸನ್ಮಾನವಲ್ಲ. ಬದಲಾಗಿ ಆ ವ್ಯಕ್ತಿಯಲ್ಲಿ ಇರಬಹುದಾದ ಒಳ್ಳೆಯ ಗುಣವೊಂದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಆ ವ್ಯಕ್ತಿಗೆ ಮಾಡಬಹುದಾದ ನಿಜವಾದ ಸನ್ಮಾನ.
47. ಸ್ವಾಮಿತ್ವದ ಸೂಕ್ಷ್ಮತೆ, ಹಣಕಾಸಿನ ನಿರ್ವಹಣೆ, ಭಕ್ತರ ಒಡನಾಟ, ಆಂತರಿಕ ಮತ್ತು ಬಾಹ್ಯ ಆಡಳಿತ, ಆಧ್ಯಾತ್ಮಿಕ ಮನೋಭಾವ ಇವುಗಳನ್ನೆಲ್ಲ ನಮ್ಮ ಪೂಜ್ಯ ಗುರುಗಳು ಹೇಳಿ ಕಲಿಸಿದವಲ್ಲ. ಬದಲಾಗಿ ಇದ್ದು ಆಚರಿಸಿ ಕಲಿಸಿದವರು.
48. ಜೀವನದಲ್ಲಿ ಒಳ್ಳೆಯ ಭವಿಷ್ಯ ಉಂಟಾಗಬೇಕಾದರೆ, ಗೌರವವಾದ ಬಾಳ್ವಿಕೆ ಉಂಟಾಗಬೇಕಾದರೆ ಕಾಲವನ್ನು ವ್ಯರ್ಥ ಮಾಡದೇ ಜ್ಞಾನ ಸಂಪಾದನೆ ಮಾಡಬೇಕು.
49. ದೇಶ ಭಕ್ತಿಯಿಲ್ಲದವನು ಜೀವಂತವಾಗಿದ್ದರೂ ಮರಣಪ್ರಾಯ.
50. ಜಗತ್ತಿನ ಜೀವನದಲ್ಲಿ ಮನುಷ್ಯ ಧರ್ಮದ ಅವಶ್ಯಕತೆ ಮಿಗಿಲಾಗಿರುವುದು. ಧರ್ಮ ಆಚರಣೆಯಾದಾಗ ಜಗತ್ತು ಶಾಂತಿ ಸಾಮ್ರಾಜ್ಯವಾಗುತ್ತದೆ. ಧರ್ಮ ಉಲ್ಲಂಘನೆಯಾದರೆ ಜಗತ್ತು ಗೊಂದಲ ವಾತಾವರಣಕ್ಕೆ ಈಡಾಗುತ್ತದೆ.

https://www.youtube.com/watch?v=2lK_EgaS96U

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *