ಕೊಳವೆಬಾವಿಯಿಂದ ಜೀವಂತವಾಗಿ ಹೊರಬಂದ ಬಳಿಕ ಸಾವನ್ನಪ್ಪಿದ 5ರ ಬಾಲಕಿ

Public TV
2 Min Read
haryana borewell

ಚಂಡೀಗಢ: ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಕೊಳವೆಬಾವಿಗೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ್ದ. ಈ ಸಾವಿನ ನೋವು ಮಾಸುವ ಮುನ್ನವೇ ಹರ್ಯಾಣದಲ್ಲಿ 5 ವರ್ಷದ ಬಾಲಕಿಯೊಬ್ಬಳು ಕೊಳವೆಬಾವಿಗೆ ಬಿದ್ದ ಘಟನೆ ನಡೆದಿದೆ. ವಿಪರ್ಯಾಸವೆಂದರೆ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಜೀವಂತವಾಗಿ ಹೊರತೆಗೆದ ಬಳಿಕ ಬಾಲಕಿ ಸಾವನ್ನಪ್ಪಿದ್ದಾಳೆ.

ಹರ್ಯಾಣದ ಘರೌಂಡಾದ ಹರಿಸಿಂಗ್‌ಪುರ ಗ್ರಾಮದಲ್ಲಿ ಶಿವಾನಿ(5) ಕೊಳವೆಬಾವಿಗೆ ಬಿದ್ದಿದ್ದಳು. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಶಿವಾನಿ 50-60 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದಳು. ಆದರೆ ಪೋಷಕರು ಬಾಲಕಿ ಕಾಣೆಯಾಗಿದ್ದಾಳೆ ಎಂದು ಆಕೆಗಾಗಿ ಹುಡುಕಾಟ ನಡೆಸಿದಾಗ ಕೊಳವೆಬಾವಿಯಲ್ಲಿ ಮಗಳು ಬಿದ್ದಿರುವುದು ತಿಳಿದುಬಂದಿದೆ. ಇದನ್ನೂ ಓದಿ:ಟಿವಿ ನೋಡುವುದರಲ್ಲಿ ದಂಪತಿ ಬ್ಯುಸಿ- ಟಬ್‍ನಲ್ಲಿ ಬಿದ್ದು ಪುತ್ರಿ ಸಾವು

haryana borewell 2

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ಬಾಲಕಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಬಾಲಕಿ ಕೆಳಮುಖವಾಗಿ ಕೊಳವೆಬಾವಿಯಲ್ಲಿ ಬಿದ್ದಿದ್ದ ಕಾರಣ ರಕ್ಷಣಾ ಕಾರ್ಯಾಚರಣೆ ವೇಳೆ ಆಕೆಯ ಕಾಲುಗಳು ಮಾತ್ರ ಕ್ಯಾಮೆರಾದಲ್ಲಿ ಕಾಣಿಸುತ್ತಿದ್ದವು. ಇತ್ತ ಆಕೆಯ ಉಸಿರಾಟಕ್ಕಾಗಿ ಆಮ್ಲಜನಕವನ್ನು ಕೂಡ ಕೊಳವೆಬಾವಿಯಲ್ಲಿ ಒದಗಿಸಲಾಗಿತ್ತು.

haryana borewell 1

ಇಂದು ಬೆಳಗ್ಗೆ ಸತತ ಶ್ರಮದಿಂದ ಹರಸಾಹಸ ಪಟ್ಟು ಎನ್‌ಡಿಆರ್‌ಎಫ್ ತಂಡ ಬಾಲಕಿಯನ್ನು ಜೀವಂತವಾಗಿ ಹೊರತೆಗೆದಿದ್ದರು. ಆದರೆ ಕೊಳವೆಬಾವಿಯಲ್ಲಿ ಬಿದ್ದ ಪರಿಣಾಮ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಳು. ಹೀಗಾಗಿ ಆಕೆಯನ್ನು ರಕ್ಷಣಾ ಪಡೆ ಆಸ್ಪತ್ರೆಗೆ ರವಾನಿಸಿದರೂ ಬಾಲಕಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಇದನ್ನೂ ಓದಿ:ಕೊನೆಗೂ ಬದುಕಿ ಬರಲಿಲ್ಲ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ

ಈ ಬಗ್ಗೆ ಹರ್ಯಾಣ ಸಿಎಂ ಟ್ವೀಟ್ ಮಾಡಿ ಬಾಲಕಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಘರೌಂಡಾದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 5 ವರ್ಷದ ಶಿವಾನಿ ಸಾವನ್ನಪ್ಪಿದ್ದಾಳೆ. ಆಕೆಯನ್ನು ಜಿಲ್ಲಾ ರಕ್ಷಣಾ ಪಡೆ ಹಾಗೂ ಎನ್‌ಡಿಆರ್‌ಎಫ್ ತಂಡ ಜೀವಂತವಾಗಿ ಕೊಳವೆಬಾವಿಯಿಂದ ಹೊರತೆಗೆಯಲಾಗಿತ್ತು. ಆಕೆಯನ್ನು ಆಸ್ಪತ್ರೆಗೂ ರವಾನಿಸಲಾಯಿತು. ಆದರೆ ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಬಾಲಕಿಯ ಕುಟುಂಬಕ್ಕಾಗಿ ನಾನು ಪ್ರಾರ್ಥಿಸುತ್ತೇನೆ, ಅವರೊಂದಿಗೆ ನಾನಿದ್ದೇನೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅ.25ರಂದು ತಮಿಳುನಾಡಿನ ತಿರುಚ್ಚಿ ನಡಕಟ್ಟುಪಟ್ಟಿ ಸಮೀಪ ಕೊಳವೆಬಾವಿಯಲ್ಲಿ ಸುಜಿತ್(2) ಆಯಾತಪ್ಪಿ ಬಿದ್ದಿದ್ದನು. ಸುಮಾರು 600 ಅಡಿ ಆಳದ ಕೊಳವೆಬಾವಿಯಲ್ಲಿ ಬಿದ್ದ ಸುಜಿತ್ 100 ಅಡಿ ಆಳದಲ್ಲಿ ಸಿಲುಕಿದ್ದನು. ನಾಲ್ಕು ದಿನಗಳ ಕಾಲ ಸುಜಿತ್‌ನನ್ನು ರಕ್ಷಿಸಲು ಅಲ್ಲಿನ ಜಿಲ್ಲಾಡಳಿತ ಹರಸಾಹಸ ಪಟ್ಟರೂ ಬಾಲಕನ ಜೀವಂತವಾಗಿ ಹೊರಬರಲಿಲ್ಲ.

ಕೊಳವೆ ಬಾವಿಯಿಂದ ವಿಪರೀತ ದುರ್ವಾಸನೆ ಬರುತ್ತಿರುವ ಕಾರಣ ಅಧಿಕಾರಿಗಳು ಕಾರ್ಯಾಚರಣೆಯನ್ನು ನಿಲ್ಲಿಸಿದ್ದರು. ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ನಾವು ಬಾಲಕನನ್ನು ರಕ್ಷಣೆ ಮಾಡಲು ಸಾಕಷ್ಟು ಕಷ್ಟಪಟ್ಟೆವು ಆದರೆ ನಮ್ಮಿಂದ ಆತನನ್ನು ಜೀವಂತವಾಗಿ ಕೊಳವೆಬಾವಿಯಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ. ಕೊಳವೆಬಾವಿಯಿಂದ ಮೃತದೇಹದ ಕೊಳೆತ ದುರ್ವಾಸನೆ ಬರುತ್ತಿದ್ದ ಕಾರಣ ಆತ ಮೃತಪಟ್ಟಿರುವುದು ಖಚಿತವಾಯಿತು ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *