– ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ
ಮಡಿಕೇರಿ: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಜನರಿಗೆ ರಕ್ಷಣೆ ನೀಡಲು ಸರ್ಕಾರ ಸಿದ್ಧವಾಗಿದ್ದು, ಈಗಾಗಲೇ ಆಯಾ ಜಿಲ್ಲಾಡಳಿತಗಳು ಈ ಕಾರ್ಯದಲ್ಲಿ ತೊಡಗಿದೆ. ಪ್ರವಾಹ ಪರಿಹಾರ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಮಾಹಿತಿ ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಕಳೆದ 2 ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರವಾಹ ಪರಿಹಾರ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುತ್ತಿದೆ. ಈಗಾಗಲೇ ಕುಶಾಲನಗರದಲ್ಲಿ ಆಗಿರುವ ಮುಳುಗಡೆ ವೀಕ್ಷಿಸಿದ್ದೇನೆ. ರಕ್ಷಣಾ ಕಾರ್ಯ ಮಾಡಲು 40 ಜನರ ಎನ್‍ಡಿಆರ್ ಎಫ್ ತಂಡ ಕಾರ್ಯ ಪ್ರವೃತ್ತವಾಗಿದ್ದು, ಇದುವರೆಗೂ 600 ಕುಟುಂಬಗಳ 2 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ಎಲ್ಲಾ ತಾಲೂಕು ಅಧಿಕಾರಿಗಳಿಗೆ ಪರಿಹಾರ ಕಾರ್ಯಕೈಗೊಳ್ಳಲು 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕುಶಾಲನಗರ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ತಲಾ 10 ಲಕ್ಷ ರೂ. ನೀಡಲಾಗಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಬೋಟ್ ನಿಂದ ಜನರ ಸ್ಥಳಾಂತರಕ್ಕೆ ಸಾಧ್ಯವಾಗದಿದ್ದರೆ ಏರ್ ಲಿಫ್ಟ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಪರಿಹಾರ ಕಾರ್ಯ ಕೈಗೊಳ್ಳಲು 100 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.
Advertisement
ಜಿಲ್ಲೆಯಲ್ಲಿ ಇದುವರೆಗೂ 25 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 604 ಕುಟುಂಬಗಳ ಒಟ್ಟು 2,136 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 58 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, 14 ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಭಾಗಮಂಡಲದ ಸಮೀಪ ಸಂಭವಿಸಿದ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿ, ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು.