ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಳೆದ ರಾತ್ರಿ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿದೆ.
ರಾತ್ರಿ ಸುಮಾರು 12:30ರ ವೇಳೆಗೆ ಅಪಘಾತವಾಗಿದ್ದು, ಸರ್ಕಾರಿ ಅಂಬುಲೆನ್ಸ್ ಹಾಗೂ ವ್ಯಾಗನಾರ್ ಕಾರ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ವ್ಯಾಗನಾರ್ ಕಾರಿನಲ್ಲಿದ್ದ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಾಗನಾರ್ ಕಾರಿನಲ್ಲಿ ಚೆನೈ ನಿಂದ ಆರ್‍ಟಿ ನಗರದ ಸಂಬಂಧಿಕರ ಮನೆಗೆ ಸಾವನ್ನಪ್ಪಿದವರು ಬರುತ್ತಿದ್ದರು. ಈ ವೇಳೆ ಕಾರು ಅಂಬುಲೆನ್ಸ್ ಗೆ ಡಿಕ್ಕಿಯಾಗಿದೆ. ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಬಗ್ಗೆ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.