ಲಕ್ನೋ: ಮೀನುಗಾರಿಕೆಗೆ ತೆರಳುತ್ತಿದ್ದ ಟೋಟೋ (ಆಟೋ) ಹಾಗೂ ಟಿಪ್ಪರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐದು ಮಂದಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ ಬರ್ದ್ವಾನ್ನಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 2ಬಿ ನಲ್ಲಿ ಟೋಟೋ ವಾಹನ ಹಾಗೂ ದೊಡ್ಡ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗಾ ಸಂತ್ರ, ಮಾಮೋನಿ ಸಂತ್ರ, ಸರಸ್ವತಿ ಸಂತ್ರ, ಸೀಮಾ ಸಂತ್ರ (ಒಂದೇ ಕುಟುಂಬದ ಸದಸ್ಯರು) ಮತ್ತು ಮೊಹಿನುದ್ದೀನ್ ಶೇಖ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಮಾರಾಮಾರಿ- ಐವರು ಬಿಜೆಪಿ ಶಾಸಕರು ಅಮಾನತು
ಸಂತ್ರಾ ಕುಟುಂಬದವರು ಪ್ರತಿದಿನ ಬೆಳಗ್ಗೆ ಮೀನುಗಾರಿಕೆಗೆ ತೆರಳಲು ಮೊಹಿನುದ್ದೀನ್ ಅವರ ವಾಹನವನ್ನು ಬಾಡಿಗೆಗೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಸಮೀಪದ ನದಿಗೆ ತೆರಳುತ್ತಿದ್ದ ವೇಳೆ ಮೊಹಿನುದ್ದೀನ್ ಸಹ ಜೊತೆಯಲ್ಲೇ ಇದ್ದನು. ವೇಗವಾಗಿ ಎದುರಿನಿಂದ ಬಂದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಆಟೋ ಸಂಪೂರ್ಣ ಜಖಂಗೊಂಡು ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.