ಲಕ್ನೋ: ವಾರಣಾಸಿ ಜ್ಞಾನವಾಪಿ ಮಸೀದಿಯ (Gyanvapi Masjid) ಒಳಗಡೆ ಪೂಜೆ ಮಾಡುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳೆಯರು (5 Hindu Women) ಸಲ್ಲಿಸಿದ್ದ ಸಿವಿಲ್ ಅರ್ಜಿಯನ್ನು ಪ್ರಶ್ನಿಸಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ವಜಾಗೊಳಿಸಿದೆ.
ರಾಖಿಸಿಂಗ್ ಸೇರಿ ಐವರು ಮಹಿಳೆಯರು ಮಸೀದಿ ಆವರಣದಲ್ಲಿ ಇದೆ ಎನ್ನಲಾಗುತ್ತಿರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ವಾರಣಾಸಿ (Varanasi) ಜಿಲ್ಲಾ ನ್ಯಾಯಾಲಯ 2022ರ ಸೆಪ್ಟೆಂಬರ್‌ನಲ್ಲಿ ಈ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ತೀರ್ಪು (Verdict) ಪ್ರಕಟಿಸಿತ್ತು.
Advertisement
Advertisement
ಈ ಆದೇಶವನ್ನು ಅಂಜುಮಾನ್ ಇಂತಾಜಾಮಿಯಾ ಮಸೀದಿ ಸಮಿತಿ (Anjuman Intezamia Masjid Committee) ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ವಾದ ಪ್ರತಿವಾದವನ್ನು ಅಲಿಸಿದ್ದ ಜೆಜೆ ಮುನೀರ್ ಅವರಿದ್ದ ಪೀಠ ಕಳೆದ ಡಿಸೆಂಬರ್‌ನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಹೈಕೋರ್ಟ್ ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯ ಎಂಬ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
Advertisement
ಹಿಂದೂ ಮಹಿಳೆಯರ ಪರ ವಾದ ಮಂಡಿಸಿದ ವಕೀಲ ಹರಿಶಂಕರ್ ಜೈನ್ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿ, ಇದೊಂದು ದೊಡ್ಡ ಗೆಲುವು ಮತ್ತು ಮೈಲಿಗಲ್ಲು. ಪ್ರಸ್ತುತ ಇರುವ ರಚನೆಯನ್ನು ತೆಗೆದು ನಾವು ಅಲ್ಲಿ ಭವ್ಯವಾದ ಶಿವ ದೇವಾಲಯವನ್ನು ನಿರ್ಮಿಸುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಕ್ಷಿ ಕೊಲ್ಲಲು 15 ದಿನಗಳ ಹಿಂದೆಯೇ ಹರಿದ್ವಾರದಿಂದ ಚಾಕು ಖರೀದಿಸಿದ್ದ ಸಾಹಿಲ್!
Advertisement
ಈ ಹಿಂದೆ ಜ್ಞಾನವ್ಯಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲ್ಲೇ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು.
ಏನಿದು ಪ್ರಕರಣ?
ಈ ಹಿಂದೆ ಕೆಳ ಹಂತದ ಕೋರ್ಟ್ ಮಸೀದಿಯಲ್ಲಿ ಉತ್ಖನನಕ್ಕೆ ಅನುಮತಿ ನೀಡಿತ್ತು. ಉತ್ಖನನ ವೇಳೆ ಮಸೀದಿಯಲ್ಲಿ ಶೃಂಗಾರ ಗೌರಿ ಮೂರ್ತಿ ಮತ್ತು ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಬಳಿಕ ಹಿಂದೂ ಧಾರ್ಮಿಕ ಕುರುಹುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅನುಮತಿ ಕೋರಿ ಸೀತಾ ಸಾಹು ಸೇರಿ, ಐವರು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಮಸೀದಿಯ ಆಡಳಿತ ಮಂಡಳಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಐವರ ಅರ್ಜಿಗಳು ವಿಚಾರಣೆಗೆ ಯೋಗ್ಯವೇ ಎಂಬುದನ್ನು ಮೊದಲು ನಿರ್ಧರಿಸಿ ಎಂದು ವಾರಣಾಸಿ ಕೋರ್ಟ್‍ಗೆ ನಿರ್ದೇಶನ ನೀಡಿತ್ತು.
ಮುಸ್ಲಿಮ್ ಸಮಿತಿಯ ವಾದ ಏನಿತ್ತು?
ಮುಸ್ಲಿಮರ ಪರ ವಾದ ಮಂಡಿಸಿದ ವಕೀಲರು 1991ರ ವಿಶೇಷ ಪೂಜಾ ಸ್ಥಳ ಕಾಯ್ದೆಯನ್ನು ಪ್ರಮುಖವಾಗಿ ವಿಚಾರಣೆ ವೇಳೆ ಉಲ್ಲೇಖಿಸಿದ್ದರು. 1991ರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ಧಾರ್ಮಿಕ ಸ್ವರೂಪವನ್ನು ಬದಲಿಸುವಂತಿಲ್ಲ. 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ಕಾಯ್ದೆಯ ಅನ್ವಯ ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಸಾಧ್ಯವಿಲ್ಲ. ಜ್ಞಾನವ್ಯಾಪಿ ಮಸೀದಿ 16-17 ಶತಮಾನದ ಪುರಾತನ ಧಾರ್ಮಿಕ ಪ್ರದೇಶವಾಗಿರುವ ಈ ಹಿನ್ನಲೆ ಈ ನಿಯಮ ಅನ್ವಯವಾಗಲಿದೆ. ಒಂದು ವೇಳೆ ಪೂಜೆಗೆ ಅವಕಾಶ ನೀಡಿದ್ದಲ್ಲಿ ದೇಶದಲ್ಲಿ ಇಂತಹ ಹತ್ತಾರು ವಿವಾದಾತ್ಮಕ ಪ್ರದೇಶಗಳಲ್ಲೂ ಪೂಜೆ ಅವಕಾಶ ಕೇಳುವ ಸಾಧ್ಯತೆಗಳಿರುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ವಝುಖಾನದಲ್ಲಿ ಪತ್ತೆಯಾಗಿರುವುದು ನೀರಿನ ಕಾರಂಜಿ ಮತ್ತು ಅಲ್ಲಿ ಯಾವುದೇ ಶೃಂಗಾರ ಗೌರಿ ಮೂರ್ತಿಗಳಿಲ್ಲ, ಅದು ಹಳೆಯ ವಾಸ್ತು ಶಿಲ್ಪ ಶೈಲಿಯಾಗಿದೆ ಎಂದು ವಾದ ಮಂಡಿಸಿದ್ದರು.
ವಾರಣಾಸಿ ಜಿಲ್ಲಾ ನ್ಯಾಯಾಲಯ ಹೇಳಿದ್ದೇನು?
ಮಸೀದಿ ಒಳಗಡೆ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ 1993ರ ವರೆಗೆ ಪೂಜೆ ಮಾಡಲು ಅವಕಾಶವಿತ್ತು. ಆದರೆ 1993ರ ನಂತರ ಉತ್ತರ ಪ್ರದೇಶ ಸರ್ಕಾರ ನಿಯಂತ್ರಣದ ಅಡಿ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ. ಹೀಗಾಗಿ ವಿವಾದಿತ ಜಾಗದಲ್ಲಿ 1947ರ ಆಗಸ್ಟ್ 15 ರ ನಂತರವೂ ಪೂಜೆ ಸಲ್ಲಿಕೆಗೆ ಅನುಮತಿ ಇದ್ದ ಕಾರಣ 1991ರ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಯ ಒಳಗಡೆ ಬರುವುದಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡದಂತೆ ನಿರ್ಬಂಧಿಸಲು ಸಾಧ್ಯವಿಲ್ಲ.
ಅರ್ಜಿದಾರರು ಇಲ್ಲಿ ಪೂಜೆ ಮಾಡಲು ಮಾತ್ರ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ ಹೊರತು ಈ ವಿವಾದಿತ ಜಾಗದ ಸಂಪೂರ್ಣ ಹಕ್ಕು ದೇವಸ್ಥಾನಕ್ಕೆ ಸೇರಬೇಕೆಂದು ಕೇಳಿಲ್ಲ. ಹೀಗಾಗಿ ಇದು ಪೂಜಾ ಸ್ಥಳಗಳ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ. ಪೂಜೆಗೆ ಮಾತ್ರ ಸೀಮಿತವಾಗಿ ಅರ್ಜಿ ಸಲ್ಲಿಸಿದರಿಂದ ಇದು ಮೂಲಭೂತ ಹಕ್ಕು ಜೊತೆಗೆ ಇದು ಸಾಂಪ್ರದಾಯಿಕ ಧಾರ್ಮಿಕ ಹಕ್ಕು ಆಗಿದೆ.
ಸುಪ್ರೀಂನಲ್ಲಿದೆ ಅರ್ಜಿ
ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರರು 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಯಬೇಕಿದೆ.
ಹಲವು ಕಾರಣಗಳಿಂದಾಗಿ ಕಾಯ್ದೆಯ ಅಸಾಂವಿಧಾನಿಕವಾಗಿದೆ. ಹಿಂದೂ, ಜೈನ, ಬೌದ್ಧ ಮತ್ತು ಸಿಖ್ಖರ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾಯ್ದೆಯಿಂದ ನಿರ್ಬಂಧಿಸಲಾಗಿದೆ. ಮಥುರಾದಲ್ಲಿರುವ ಕೃಷ್ಣ ಜನ್ಮಸ್ಥಾನದ ಜಾಗಕ್ಕಾಗಿ ಹಿಂದೂಗಳು ನೂರಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಶಾಂತಿಯುತವಾದ ಚಳವಳಿ ನಡೆಸುತ್ತಿದ್ದಾರೆ. ಆದರೆ ಈ ಕಾಯ್ದೆ ರೂಪಿಸುವಾಗ ಕೇಂದ್ರ ಸರ್ಕಾರ ಆಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣವನ್ನು ಮಾತ್ರ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಿದೆ. ಕೃಷ್ಣ ಜನ್ಮಸ್ಥಾನವಾದ ಮಥುರಾವನ್ನು ಹೊರಗೆ ಇರಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.