ದಿಸ್ಪುರ್: ಅಸ್ಸಾಂನ (Assam) ಕೊಕ್ರಜಾರ್‌ನ ಮಹಾಮಾಯಾ ದೇವಸ್ಥಾನದ (Mahamaya Temple) ಬಳಿ ನಿಂತಿದ್ದ ಭಕ್ತರ ಮೇಲೆ ಟ್ರಕ್ ಹರಿದ (Accident) ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ನಬೋಜಿತ್ ಘೋಷ್ (22), ಸುಕ್ರ ಕಾಂತ ರಾಯ್ (20), ಜೋಯೋ ರಾಯ್ (11), ಬಪ್ಪಿ ಘೋಷ್ (21), ಮತ್ತು ಬಸುದೇವ್ ರಾಯ್ (22) ಎಂದು ಗುರುತಿಸಲಾಗಿದೆ. ಮೃತರೆಲ್ಲ ಗೊಸಾಯಿಗಾಂವ್ ಪ್ರದೇಶದ ಹತಿಗಢ ಗ್ರಾಮದ ನಿವಾಸಿಗಳಾಗಿದ್ದಾರೆ.
ಭಕ್ತರು ಶ್ರಾವಣ ಮಾಸದ ವಿಶೇಷ `ಬೋಲ್ ಬೊಮ್’ ಯಾತ್ರೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಜನರ ಮೇಲೆ ಹರಿದಿದೆ. ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ದೇವಾಲಯದ ಬಳಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದನ್ನು ನಿಷೇಧಿಸಲಾಗಿದೆ. ಆದರೂ ಟ್ರಕ್ ಚಾಲಕ ಮಿತಿಮೀರಿದ ವೇಗದಲ್ಲಿ ಬಂದು ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.