ಶ್ರೀನಗರ: ಚಾಲನ ನಿಯಂತ್ರಣ ತಪ್ಪಿದ ಕಾರು ಆಳವಾದ ಕಂದಕಕ್ಕೆ ಬಿದ್ದು ಇಬ್ಬರು ಬಾಲಕಿಯರು ಸೇರಿದಂತೆ ಐವರು ಮೃತಪಟ್ಟ ದುರ್ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಖುಡ್ಮಲ್ಲಾ ದನ್ಮಾಸ್ತಾದ ಮೊಹಮ್ಮದ್ ಅಶ್ರಫ್ ಜರಾಲ್ ಅವರ ಪುತ್ರಿ ನೀಲೋಫರ್ ಬಾನೊ (16), ಬಟೋಟ್‍ದ ಧ್ಯಾನ್ ಚಂದ್ ಅವರ ಪತ್ನಿ ತರ್ಡಾ ದೇವಿ (54), ಕ್ರಿಮ್ಚಿಯ ಸುಭಾಶ್ ಸಿಂಗ್ ಅವರ ಪುತ್ರಿ ಸಾನ್ವಿ ದೇವಿ (10), ಅಲಿನ್‍ಬಾಸ್‍ನ ಮೊಹಮ್ಮದ್ ಇಕ್ಬಾಲ್ ಜರಾಲ್ ಮತ್ತು ಚಾಲಕ ಜಾವಿದ್ ಅಹ್ಮದ್ ಜರಾಲ್ (45) ಮೃತ ದುರ್ದೈವಿಗಳು.
ರಾಂಬನ್ ಜಿಲ್ಲೆಯ ರಾಮ್ಸು ಪ್ರದೇಶದ ಅಲಿನ್‍ಬಾಸ್‍ನಿಂದ ಉಖ್ರಾಲ್‍ಗೆ ಕಾರಿನಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದು, ಗಂಭಿರವಾಗಿ ಗಾಯಗೊಂಡಿದ್ದ ಚಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಉಳಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ರಾಂಬನ್ ಎಸ್‍ಪಿ ಅನಿತಾ ಶರ್ಮಾ ತಿಳಿಸಿದ್ದಾರೆ.
ವೇಗವಾಗಿ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆ ಅಪಘಾತಗಳು ಹೊಸದೇನಲ್ಲ. ಈ ಹಿಂದೆ ಜುಲೈ 1ರಂದು ಕಿಶ್‍ತ್ವಾರ್ ಜಿಲ್ಲೆಯಲ್ಲಿ ಮಿನಿ ಬಸ್ ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಬಿದ್ದು 35 ಜನರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ 17 ಮಂದಿ ಗಾಯಗೊಂಡಿದ್ದರು. ಜೂನ್ 27ರಂದು ಮೊಘಲ್ ರಸ್ತೆಯಲ್ಲಿ ವೇಗವಾಗಿ ಬರುತತ್ತಿದ್ದ ಟೆಂಪೋ ರಸ್ತೆಯಿಂದ ಜಾರಿ ಕಂದಕಕ್ಕೆ ಬಿದ್ದ ಪರಿಣಾಮ ಪೂಂಚ್‍ನ 9 ಬಾಲಕಿಯರನ್ನು ಒಳಗೊಂಡಂತೆ 11 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.