ರಾಯಗಢ: ಕುಟುಂಬ ಸಮೇತ ಮದುವೆಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 5 ಜನ ಸಾವನ್ನಪ್ಪಿದ್ದು, 27 ಜನ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ರಾಯಗಢನಲ್ಲಿ (Raigad) ನಡೆದಿದೆ.
ಮೃತರನ್ನು ಸಂಗೀತಾ ಜಾಧವ್, ಗೌರವ್ ದಾರಾಡೆ, ಶಿಲ್ಪಾ ಪವಾರ್, ವಂದನಾ ಜಾಧವ್ ಎಂದು ಗುರುತಿಸಲಾಗಿದ್ದು, ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಸಿ.ಟಿ.ರವಿಗೆ ಬಿಗ್ ರಿಲೀಫ್ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ
ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ಮಾತನಾಡಿ, ಇಂದು (ಡಿ.20) ಬೆಳಿಗ್ಗೆ 9:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಮದುವೆಗಾಗಿ ಖಾಸಗಿ ಬಸ್ (ಪರ್ಪಲ್ ಟ್ರಾವೆಲ್ಸ್)ನಲ್ಲಿ ಪುಣೆಯ ಲೋಹೆಗಾಂವ್‌ನಿಂದ ಮಹಾಡ್‌ನ ಬಿರ್ವಾಡಿಗೆ ಹೊರಟಿದ್ದರು. ಈ ವೇಳೆ ತಮ್ಹಿನಿ ಘಾಟ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್ ಕಮರಿಗೆ ಉರುಳಿದೆ ಎಂದರು.
ಘಟನಾ ಸ್ಥಳಕ್ಕೆ ಮಾಂಗಾವ್ ಪೊಲೀಸ್ (Mangaon police) ಠಾಣೆಯ ತಂಡ ಆಗಮಿಸಿ ಗಾಯಗೊಂಡವರನ್ನು ಮಾಂಗಾವ್ ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ. ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯಗಢ ಜಿಲ್ಲೆಯ ಸಿವಿಲ್ ಸರ್ಜನ್ ಡಾ.ಅಂಬಾದಾಸ್ ಮಾತನಾಡಿ, ಐವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೂವರು ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪುಣೆಯ ಸ್ಯಾಸೂನ್ ಜನರಲ್ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಮನೆಗೆ ಬಂದ ಪಾರ್ಸೆಲ್‌ನಲ್ಲಿತ್ತು ವ್ಯಕ್ತಿಯ ಮೃತದೇಹ – ಬಾಕ್ಸ್ ಓಪನ್ ಮಾಡಿ ಮಹಿಳೆ ಶಾಕ್!