ಮೊಡವೆ, ಕಲೆಗಳಿಲ್ಲದೆ ಕ್ಲಿಯರ್ ಸ್ಕಿನ್ ಇರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆ. ಆದ್ರೆ ಒಂದು ಮೊಡವೆಯಾದ್ರೆ ಅದರ ಕಲೆ ಸಾಕಷ್ಟು ದಿನಗಳವರೆಗೆ ಉಳಿದುಬಿಡುತ್ತೆ. ಜೊತೆಗೆ ಬ್ಲಾಕ್‍ಹೆಡ್ಸ್, ಆಯ್ಲಿ ಸ್ಕಿನ್ ಸಮಸ್ಯೆ ಬೇರೆ. ಈ ಎಲ್ಲದಕ್ಕೂ ಪರಿಹಾರವಾಗಿ ಇಲ್ಲಿದೆ 5 ಟಿಪ್ಸ್.
ಯಾವುದೇ ಫೇಸ್‍ಪ್ಯಾಕ್ ಹಾಕೋ ಮುನ್ನ ಮುಖವನ್ನ ಕಡಲೆಹಿಟ್ಟು ಅಥವಾ ಫೇಸ್‍ವಾಶ್‍ನಿಂದ ತೊಳೆಯಿರಿ. ಮುಖ ತೊಳೆದ ನಂತರ ಮೃದುವಾದ ಬಟ್ಟೆಯನ್ನ ಮುಖದ ಮೇಲೆ ಒತ್ತಿ. ಟವಲ್‍ನಿಂದ ಮುಖವನ್ನ ಉಜ್ಜಿ ಒರೆಸೋದ್ರಿಂದ ಕ್ರಮೇಣವಾಗಿ ಮುಖ ಸುಕ್ಕುಗಟ್ಟುತ್ತದೆ. ಫೇಸ್ ಪ್ಯಾಕ್ ತೊಳೆದ ನಂತರ ರೋಸ್ ವಾಟರ್ ಅಥವಾ ಮಾಯ್ ಶ್ಚರೈಸರ್ ಹಚ್ಚೋದನ್ನ ಖಂಡಿತ ಮರೆಯಬೇಡಿ.
1. ಆಲೂಗಡ್ಡೆ
ಆಲೂಗಡ್ಡೆಯನ್ನ ಸಣ್ಣಗೆ ತುರಿದುಕೊಂಡು ಅಥವಾ ಸಣ್ಣ ಜಾರ್‍ನಲ್ಲಿ ರುಬ್ಬಿಕೊಂಡು ಅದರ ರಸ ತೆಗೆದಿಟ್ಟುಕೊಳ್ಳಿ. ನಂತರ ಒಂದು ಹತ್ತಿಯ ಉಂಡೆಯನ್ನ ಆಲೂಗಡ್ಡೆ ರಸದಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಒಂದು ಬಾರಿ ಹಚ್ಚಿ, ಅದು ಒಣಗಿದ ನಂತರ ಮತ್ತೊಮ್ಮೆ ಹಚ್ಚಿ. ಹೀಗೆ ಮೂರರಿಂದ ನಾಲ್ಕು ಬಾರಿ ಮುಖಕ್ಕೆ ರಸವನ್ನ ಹಚ್ಚಿ ಒಣಗಲು ಬಿಡಿ. 20 ನಿಮಿಷಗಳ ನಂತರ ಮುಖ ತೊಳೆದು ನಂತರ ರೋಸ್‍ವಾಟರ್ ಹಚ್ಚಿಕೊಳ್ಳಿ. ಈ ರೀತಿ ಪ್ರತಿದಿನ 15 ದಿನಗಳವರೆಗೆ ಮಾಡಿ ನೋಡಿ ರಿಸಲ್ಟ್ ನಿಮಗೇ ಗೊತ್ತಾಗುತ್ತದೆ.
2. ಜೇನುತುಪ್ಪ- ಚಕ್ಕೆ/ದಾಲ್ಚಿನಿ ಪೌಡರ್
ದಾಲ್ಚಿನಿ ಅಥವಾ ಚಕ್ಕೆಯನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಪ್ರತಿದಿನ ಮಲಗುವ ಮುನ್ನ 2 ಚಿಟಿಕೆ ದಾಲ್ಚಿನಿ ಪುಡಿಗೆ ಕಾಲು ಚಮಚ ಜೇನುತುಪ್ಪ ಮತ್ತು 1 ಸ್ಪೂನ್ ನೀರು ಹಾಕಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿ ಮಲಗಿ. ಬೆಳಗ್ಗೆ ಎದ್ದ ನಂತರ ಕಡಲೆಹಿಟ್ಟು ಅಥವಾ ಮೃದುವಾದ ಫೇಸ್‍ವಾಶ್‍ನಿಂದ ತೊಳೆಯಿರಿ. ರಾತ್ರಿಯಿಡೀ ಜೇನುತುಪ್ಪ ಹಚ್ಚಿಕೊಂಡು ಮಲಗಲು ಕಿರಿಕಿರಿಯೆನಿಸಿದ್ರೆ ಸಮಯ ಸಿಕ್ಕಾಗ 1 ಗಂಟೆ ಕಾಲ ಈ ಪ್ಯಾಕ್ ಹಚ್ಚಿ ನಂತರ ತೊಳೆದು ರೋಸ್‍ವಾಟರ್ ಹಚ್ಚಿಕೊಳ್ಳಿ.
3. ಗ್ರೀನ್ ಟೀ
ಒಂದು ಪಾತ್ರೆಗೆ ನೀರು ಹಾಕಿ ಅದು ಕುದಿಯುವಾಗ ಗ್ರೀ ಟೀ ಬ್ಯಾಗ್ ಅಥವಾ ಗ್ರೀನ್ ಟೀ ಪುಡಿ ಹಾಕಿ ಬೇಯಿಸಿ. ನಂತರ ಒಲೆಯಿಂದ ಪಾತ್ರೆ ಕೆಳಗಿಳಿಸಿ, ತಲೆಯ ಮೇಲೆ ಒಂದು ಟವೆಲ್ ಹೊದ್ದುಕೊಂಡು 5 ನಿಮಿಷ ಸ್ಟೀಮ್ ತೆಗೆದುಕೊಳ್ಳಿ. ಇದಾದ ಬಳಿಕ ಗ್ರೀ ಟೀ ಡಿಕಾಕ್ಷನ್ ಬಿಸಾಡುವುದು ಬೇಡ. ಡಿಕಾಕ್ಷನ್ ಸೋಸಿಕೊಂಡು ಅದು ತಣ್ಣಗಾದ ನಂತರ ಒಂದು ಚಮಚ ಜೇನುತುಪ್ಪ, ಒಂದು ಚಮಚ ಆಲೋವೆರಾ ಜೆಲ್ ಹಾಗೂ 1 ಚಮಚ ರೋಸ್‍ವಾಟರ್ ಹಾಕಿ ಆಲೋವೆರಾ ಜೆಲ್ ಕರಗುವಂತೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನ ಐಸ್‍ಕ್ಯೂಬ್ ಟ್ರೇನಲ್ಲಿ ಹಾಕಿ ಫ್ರೀಜ್ ಮಾಡಿ. ಪ್ರತಿದಿನ ಮಲಗುವಾಗ ಒಂದು ಕ್ಯೂಬ್ ತೆಗೆದುಕೊಂಡು ಮುಖಕ್ಕೆ ಮಸಾಜ್ ಮಾಡಿ ಹಾಗೇ ಮಲಗಿ. ರಾತ್ರಿ ಹಚ್ಚಿಕೊಂಡು ಮಲಗಲು ಇಷ್ಟವಿಲ್ಲವಾದ್ರೆ ಒಂದು ಗಂಟೆಯ ಬಳಿಕ ಮುಖ ತೊಳೆದು ರೋಸ್ ವಾಟರ್ ಹಚ್ಚಿ. ವಾರಕ್ಕೆ ಒಂದು ಬಾರಿ ಸ್ಟೀಮ್ ಹಾಗು ಪ್ರತಿದಿನ ಐಸ್‍ಕ್ಯೂಬ್ ಹಚ್ಚುತ್ತಾ ಬಂದ್ರೆ ಕ್ರಮೇಣವಾಗಿ ಬದಲಾವಣೆ ಗಮನಿಸುತ್ತೀರ.
4. ಕಸ್ತೂರಿ ಅರಿಶಿಣ
ಗ್ರಂಧಿಗೆ(ಪೂಜಾ ಸಾಮಗ್ರಿಗಳು ಸಿಗುವ ಅಂಗಡಿ)ಗಳಲ್ಲಿ ಕಸ್ತೂರಿ ಅರಿಶಿಣ ಲಭ್ಯ. 2 ಚಿಟಿಕೆ ಕಸ್ತೂರಿ ಅರಿಶಿಣಕ್ಕೆ ಸ್ವಲ್ಪ ನೀರು ಮಿಕ್ಸ್ ಮಾಡಿ ರಾತ್ರಿ ಮಲಗುವಾಗ ಮುಖಕ್ಕೆ ಹಚ್ಚಿ ಮಲಗಿ. ಬೆಳಗ್ಗೆ ಎದ್ದ ನಂತರ ಕಡಲೆಹಿಟ್ಟಿನಿಂದ ಮುಖ ತೊಳೆಯಿರಿ. ಮುಖದ ಮೇಲೆ ಇನ್ನೂ ಅರಿಶಿಣದ ಬಣ್ಣ ಉಳಿದಿದ್ದರೆ ಚಿಂತೆ ಬೇಡ. ಸ್ನಾನ ಮಾಡಿದಾಗ ಹೊರಟುಹೋಗುತ್ತದೆ. ಯಾವುದಾದ್ರೂ ಸಮಾರಂಭಕ್ಕೆ ಹೋಗೋ ತರಾತುರಿಯಲ್ಲಿ ಅರಿಶಿಣ ಪ್ಯಾಕ್ ಬಳಸಿದ್ರೆ ಅದು ಸಂಪೂರ್ಣವಾಗಿ ಹೋಗುವುದಿಲ್ಲ. ಜಾಂಡೀಸ್ ಬಂದವರಂತೆ ಕಾಣಬಾರ್ದು ಅಂತಿದ್ರೆ ಇದನ್ನ ರಾತ್ರಿ ಮಲಗುವಾಗ್ಲೇ ಬಳಸಿದ್ರೆ ಒಳ್ಳೆಯದು.
5. ಪುದೀನಾ
ಪುದೀನಾವನ್ನ ಪೇಸ್ಟ್ ಮಾಡಿಕೊಂಡು ಅದರ ರಸ ತೆಗೆದಿಟ್ಟುಕೊಳ್ಳಿ. ಒಂದು ಹತ್ತಿ ಉಂಡೆಯನ್ನ ಇದರಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ಮತ್ತೊಮ್ಮೆ ಹಚ್ಚಿ. ಇದೇ ರೀತಿ ಮೂರು ಬಾರಿ ಪುದೀನಾ ರಸವನ್ನ ಮುಖಕ್ಕೆ ಹಚ್ಚಿ ಒಣಗಲು ಬಿಡಿ. 20 ನಿಮಿಷಗಳ ನಂತರ ಮುಖ ತೊಳೆಯಿರಿ. 15 ದಿನಗಳವರೆಗೆ ಪ್ರತಿದಿನ ಇದನ್ನ ಬಳಸಿ ನೋಡಿ.
ಈ ಟಿಪ್ಸ್ ಗಳನ್ನ ಯಾವಾಗ್ಲೋ ಮನಸ್ಸು ಬಂದಾಗ ಮಾತ್ರ ಒಮ್ಮೆ ಟ್ರೈ ಮಾಡಿ ಏನೂ ಬದಲಾವಣೆಯೇ ಆಗ್ಲಿಲ್ಲ ಅಂತ ದೂರಬೇಡಿ. ಯಾವುದೇ ಟಿಪ್ಸ್ ಆದ್ರೂ ಇಂತಿಷ್ಟು ದಿನಗಳವರೆಗೆ ಸತತವಾಗಿ ಬಳಸಿದಾಗಲೇ ಅದರ ರಿಸಲ್ಟ್ ಗೊತ್ತಾಗುತ್ತದೆ.